ಕಳೆದ ೧೫ ವರ್ಷಗಳಿಂದ ಸಹನಿರ್ದೇಶಕ, ಸಂಭಾಷಣೆಗಾರನಾಗಿ ಕೆಲಸ ಮಾಡಿರುವ ಜಿ.ನಟರಾಜ್, ಈಗ ವ್ಹೀಲ್‌ಚೇರ್ ರೋಮಿಯೋ ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿತು.  ವಿಕಲಚೇತನ ಮಗ ತಾನು  ಮದುವೆಯಾಗಬೇಕು ಎಂದು  ಆಸೆಪಟ್ಟಾಗ ಅದನ್ನು ಪೂರೈಸಲು ಒಬ್ಬ ತಂದೆಯಾದವನು ಏನೆಲ್ಲ ಪ್ರಯತ್ನ ಮಾಡುತ್ತಾನೆ ಎನ್ನುವುದೇ ಈ ಚಿತ್ರದ ಕಥೆ. ರಾಮ್‌ಚೇತನ್ ಈ ಚಿತ್ರದ ನಾಯಕನಾಗಿದ್ದು, ನಟಿ ಮಯೂರಿ ಒಬ್ಬ  ವೇಶ್ಯೆಯ ಪಾತ್ರ ನಿರ್ವಹಿಸಿದ್ದಾರೆ. ಹಿರಿಯನಟ ಸುಚೇಂದ್ರ ಪ್ರಸಾದ್ ವಿಕಲಾಂಗ ನಾಯಕನ ತಂದೆಯಾಗಿ ನಟಿಸಿದ್ದು, ಚಿತ್ರದ ಕುರಿತಂತೆ ಮಾತನಾಡುತ್ತ ಗಾಲಿ ಕುರ್ಚಿಯ ಮೇಲೆ ಇರುವ ಹೀರೋ ಇಟ್ಟುಕೊಂಡು ನಿರ್ದೇಶಕರು ಪ್ರೇಮಕಥೆ ಹೆಣೆದಿದ್ದಾರೆ. ದೈಹಿಕ ಅಂಗವಿಕಲತೆಗಿಂತ ಮಾನಸಿಕ ಅಂಗವಿಕಲತೆ ನಮ್ಮಲ್ಲಿ ತುಂಬಾ ಇದೆ. ತಂದೆಯೊಬ್ಬ  ಮಗನ ಆಸೆ ಪೂರೈಸಲು ಹೊರಟಾಗ ಎದುರಾಗುವ ಸಂಕಷ್ಟಗಳು, ತಾಕಲಾಟಗಳು ಈ ಚಿತ್ರದಲ್ಲಿವೆ. ಹೃದಯಕ್ಕೆ ಹತ್ತಿರವಾಗುವ ಸಂಗತಿಗಳು ಕಥೆಯಲ್ಲಿ ಬಂದುಹೋಗುತ್ತವೆ ಎಂದರು. 
 
ಚಿತ್ರದ ನಾಯಕ ರಾಮ್ ಚೇತನ್ ಮಾತನಾಡಿ ಈ ಮೊದಲು ಕೆಲ ಸೀರಿಯಲ್‌ಗಳಲ್ಲಿ ಆ್ಯಕ್ಟ್ ಮಾಡಿದ್ದೆ, ಮೊದಲ ಚಿತ್ರದಲ್ಲೇ ಅಭಿನಯಕ್ಕೆ ಸಾಕಷ್ಟು ಅವಕಾಶವಿತ್ತು, ನಮ್ಮ ಚಿತ್ರಕ್ಕೆ ಸುಚೇಂದ್ರಪ್ರಸಾದ್, ರಂಗಾಯಣ ರಘು, ತಬಲಾನಾಣಿ  ಇವರೆಲ್ಲ ಆಧಾರ ಸ್ತಂಭಗಳು ಎಂದು ಹೇಳಿದರು, ಈ  ಚಿತ್ರಕ್ಕೆ  ಟ್ರಾವೆಲ್ ಕಂಪನಿ ನಡೆಸುತ್ತಿರುವ  ವೆಂಕಟಾಚಲಯ್ಯ(ವೆಂಕಟೇಶ್) ಹಾಗೂ ಶ್ರೀಮತಿ ಭಾರತಿ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಒಮ್ಮೆ ನಟರಾಜ್ ಹಾಗೂ ರಾಮ್‌ಚೇತನ್ ಬಂದು ಈ ಕಥೆ ಬಗ್ಗೆ ಹೇಳಿದರು, ಚೆನ್ನಾಗಿದೆ ಎನ್ನಿಸಿತು, ಹಾಗಾಗಿ ನಿರ್ಮಾಣಕ್ಕೆ ಮುಂದಾದೆ ಎನ್ನುವುದು ನಿರ್ಮಾಪಕರ ಮಾತು.
 
ನಿರ್ದೇಶಕ ಜಿ.ನಟರಾಜ್ ಮಾತನಾಡಿ ಚಿತ್ರದಲ್ಲಿ ೬೦% ಡೈಲಾಗ್ ಇದ್ದರೆ, ೪೦%  ಡ್ರಾಮಾ ಇರುತ್ತದೆ ಎಂದರು. ಸಂಗೀತ ನಿರ್ದೇಶಕ ಬಿ.ಜೆ. ಭರತ್ ಮಾತನಾಡಿ ಚಿತ್ರ ತುಂಬಾ ಚೆನ್ನಾಗಿ ಬಂದಿದೆ,  ಹಿನ್ನೆಲೆ ಸಂಗೀತಕ್ಕೆ ಸಾಕಷ್ಟು ಅವಕಾಶವಿತ್ತು ಎಂದರು. ಮತ್ತೊಬ್ಬ ನಟ ಗಿರೀಶ್ ಶಿವಣ್ಣ ನಾಯಕನ ಸ್ನೇಹಿತನಾಗಿ ನಟಿಸಿರುವುದಾಗಿ  ಹೇಳಿಕೊಂಡರು.