ಡಾ.ರಾಜ್‌ಕುಮಾರ್ ಅವರ ಅದ್ಭುತ ಅಭಿನಯದ ಬೇಡರ ಕಣ್ಣಪ್ಪ, ಅದೇ ಕಥೆಯನ್ನಿಟ್ಟುಕೊಂಡು ತಯಾರಾದ ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದಲ್ಲಿ ಡಾ.ಶಿವರಾಜ್‌ಕುಮಾರ್ ಅಭಿನಯಿಸಿದ್ದರು. ಅಲ್ಲದೆ ಭಕ್ತ ಕಣ್ಣಪ್ಪ ಹೆಸರಿನ ಚಿತ್ರವೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗಿತ್ತು, ಅದಾದ ನಂತರ ಈಗ ಹಿರಿಯ ನಟ, ನಿರ್ಮಾಪಕ ಮೋಹನಬಾಬು ಅವರ ಪುತ್ರ ವಿಷ್ಣು ಮಂಚು ಅಭಿನಯದಲ್ಲಿ ಅದ್ದೂರಿಯಾಗಿ ನಿರ್ಮಾಣವಾದ ಕಣ್ಣಪ್ಪ ಆಂಧ್ರ, ತೆಲಂಗಾಣದ ಜತೆ ದಕ್ಷಿಣದ ಹಲವು ರಾಜ್ಯಗಳಲ್ಲಿ ಕನ್ನಡ, ತೆಲುಗು ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗಿದೆ, ನಾಯಕ ತಿನ್ನನ ಪಾತ್ರದಲ್ಲಿ ವಿಷ್ಣು ಮಂಚು ಅಮೋಘ ಅಭಿನಯ ನೀಡಿದ್ದಾರೆ, ಚಿತ್ರದ ಕೊನೆಯ ಅರ್ಧ ಗಂಟೆ ಪ್ರೇಕ್ಷಕರನ್ನು ಭಾವನಾತ್ಮಕನಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ, ನಾಯಕಿಯಾಗಿ ಪ್ರೀತಿ ಮುಕುಂದನ್ ಕೂಡ ಚೆನ್ನಾಗಿ ನಟಿಸಿದ್ದಾರೆ.
ಒಂದೇ ಕಥೆಯನ್ನು ಆಯಾ ಕಾಲಕ್ಕೆ ತಕ್ಕಂತೆ ಆಧುನೀಕರಣಗೊಳಿಸಿ ನಿರ್ಮಿಸುವುದು ಮೊದಲಿಂದಲೂ ಬೆಳೆದುಬಂದಿದೆ, ಅದೇರೀತಿ ಈ ಚಿತ್ರದಲ್ಲೂ ಸಹ ಮೂಲ ಕಥೆಗೆ ಯಾವುದೇ ಧಕ್ಜೆ ಬಾರದಂತೆ ನಿರ್ದೇಶಕರು ಚಿತ್ರಕಥೆ ಹೆಣೆದಿದ್ದಾರೆ, ಆದರೆ ಚಿತ್ರದ ಅವಧಿ ಮೂರು ಗಂಟೆ ಸ್ವಲ್ಪ ಹೆಚ್ಚಾಯಿತು ಎನ್ನುವುದೇ ಚಿತ್ರ ನೋಡಿದ ಎಲ್ಲರ ಒಟ್ಟಾರೆ ಅಭಿಪ್ರಾಯ, ಕಣ್ಣಪ್ಪ ಉತ್ತಮ ಹಿನ್ನೆಲೆ ಸಂಗೀತವನ್ನು ಹೊಂದಿರುವ ಒಂದು ಒಳ್ಳೆಯ ಸಿನಿಮಾ. ರುದ್ರನಾಗಿ ಪ್ರಭಾಸ್ ಅವರ ಅತಿಥಿ ಪಾತ್ರ ಚಿತ್ರಕ್ಕೆ ತಿರುವು ನೀಡುತ್ತದೆ, ಕತೆಯ ಮೇಲೆ ದೊಡ್ಡ ಪರಿಣಾಮ ಬೀರುವ ಪಾತ್ರವೂ ಹೌದು. ಹಾಗೆ ನೋಡಿದರೆ ಇಡೀ ಸಿನಿಮಾದ ಕತೆ ಇರುವುದೇ ಚಿತ್ರದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ. ಅದರಲ್ಲೂ ಚಿತ್ರದ ಕ್ಲೈಮ್ಯಾಕ್ಸ್ ಭಾಗದಲ್ಲಿ ತಿನ್ನ ತನ್ನರಡು ಕಣ್ಣಿಗಳನ್ನು ಶಿವಲಿಂಗಕ್ಕೆ ಅರ್ಪಿಸು ಕಣ್ಣಪ್ಪನಾಗಿ ಬದಲಾಗುವುದು ಅದ್ಭುತವಾಗಿ ಮುಡಿಬಂದಿದೆ.
ಅಕ್ಷಯ್ ಕುಮಾರ್ ಅವರು ಶಿವನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ, ಪಾರ್ವತಿಯಾಗಿ ಕಾಜಲ್ ಅಗರವಾಲ್ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ಹಿರಿಯ ನಟಿ ಮಧುಬಾಲ ಗಮನ ಸೆಳೆಯುವ ಅಭಿನಯ ನೀಡಿದ್ದಾರೆ, ಇನ್ನು ಹಿರಿಯ ನಟರಾದ ಮೋಹನಬಾಬು, ಮೋಹನ ಲಾಲ್, ಶರತ್ ಕುಮಾರ್ ಎಲ್ಲರ ಅಭಿನಯವೂ ಉತ್ತಮವಾಗಿದೆ, ಉಳಿದಂತೆ ಚಿತ್ರದ ವಿ.ಎಫ್. ಎಕ್ಸ್. ಪರವಾಗಿಲ್ಲ, ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು, ಹಾಡುಗಳೂ ಇಂಪಾಗಿ ಮೂಡಿಬಂದಿವೆ, ಈ ಮಾಡ್ರನ್ ಯುಗದಲ್ಲಿ ಆಗಿನ ಕಾಲದ ಚಿತ್ರಣವನ್ನು ತೆರೆಮೇಲೆ ಮರುಸೃಷ್ಟಿಸುವುದು ಸುಲಭದ ವಿಷಯವೇನಲ್ಲ, ಅದರಲ್ಲಿ ಕಲಾನಿರ್ದೇಶಕನ ಕೈ ಚಳಕ ತುಂಬಾ ಪ್ರಮುಖವಾಗಿರುತ್ತದೆ, ಈ ವಿಷಯದಲ್ಲಿ ಕಣ್ಣಪ್ಪ ಗೆದ್ದಿದ್ದಾನೆ, ಚಿತ್ರ ಕಥೆಯಲ್ಲಿ ಒಂದಷ್ಟು ಹಿಡಿತ ಸಾಧಿಸಿದ್ದರೆ ಚಿತ್ರ ಮತ್ತಷ್ಟು ಉತ್ತಮವಾಗಿರುತ್ತಿತ್ತು.