ಕೊರೋನಾ ಸಮಯದಲ್ಲಿ ಪ್ರೇಮಿಗಳಿಬ್ಬರು ಕಾಡಲ್ಲಿ ಏನೇನೆಲ್ಲ ತೊಂದರೆ ತಾಪತ್ರಯಗಳನ್ನು ಎದುರಿಸಬೇಕಾಎರಡರ ದೇಶಾದ್ಯಂತ ಲಾಕ್‌ಡೌನ್ ಹೇರಲಾಗಿತ್ತು. ಅಂಥ ಸಂದರ್ಭದಲ್ಲಿ ಪಶ್ಚಿಮ ಘಟ್ಟಗಳ ತಪ್ಪಲಿನ, ಅರೆಮಲೆನಾಡು ಪ್ರದೇಶದಲ್ಲಿ ಪ್ರೇಮಿಗಳಿಬ್ಬರು ಸಿಲುಕಿಹಾಕಕೊಂಡು ಎದುರಿಸುವ ಗಂಡಾಂತರ, ಅದರ ಸುತ್ತ ಕೊಲೆಯ ನಿಗೂಢ ರಹಸ್ಯ ಇದು ಈವಾರ ತೆರೆಕಂಡಿರುವ ಜಂಗಲ್ ಮಂಗಲ್ ಚಿತ್ರದ ಕಾನ್ಸೆಪ್ಟ್. ನಾವೆಲ್ಲ ನಮ್ಮ ಜೀವನದಲ್ಲಿ ಅದೇನೇ ಪ್ಲಾನ್ ಮಾಡಿದರೂ, ವಿಧಿಯ ಆಟದ ಮುಂದೆ ನಮ್ಮದೇನೂ ನಡೆಯುವುದಿಲ್ಲ. ನಮ್ಮ ಇಷ್ಟದಂತೆ ಆಲೋಚನೆ ಮಾಡುತ್ತಾ ಹೋದರೂ ಸಹ ಸಮಯ, ಸಂದ`Àð ಎನ್ನುವುದು ಎಲ್ಲದಕ್ಕೂ ಉತ್ತರ ನೀಡುತ್ತಾ ಹೋಗುತ್ತದೆ.
ಅರಣ್ಯದಂಚಿನ ಗ್ರಾಮವೊಂದರ ಶಿಕ್ಷಕಿ ದಿವ್ಯ(ಹರ್ಷಿತಾ). ಆಕೆಯ ಕುಡುಕ ತಂದೆ, ಪ್ರೀತಿಸುವ ತಾಯಿ, ಮೂವರು ತಂಗಿಯರ ಜೊತೆ ಆಕೆಯ ಜೀವನ ಸಾಗಿರುತ್ತದೆ. ಮತ್ತೊಂದು ಕಡೆ ಐಸ್‌ಕ್ರೀಮ್ ಪಾರ್ಲರ್ ಒಂದನ್ನು ಇಟ್ಡುಕೊಂಡಿರುವ ಯುವಕ ಪ್ರವೀಣ (ಯಶ್ ಶೆಟ್ಟಿ). ಕೊರೋನಾದಿಂದ ದೇಶಾದ್ಯಂತ ನಗರ, ಗ್ರಾಮಗಳು ಲಾಕ್ಡೌನ್ ಆಗಿ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭ. ವ್ಯಾಪಾರವಿಲ್ಲದಾದಾಗ ಪ್ರವೀಣ, ತನ್ನ ಪ್ರೀತಿಯ ಗೆಳತಿ, ಅಮ್ಮಿ ಎಂದು ಕರೆಯುವ ದಿವ್ಯಳ ಸಂಪರ್ಕಿಸಲು ಹರಸಾಹಸ ಪಡುತ್ತಾನೆ. ಹೇಗೋ ಮಾಡಿ ಆಕೆಯನ್ನು ಒಪ್ಪಿಸಿ ತನ್ನ ಬೈಕ್‌ನಲ್ಲಿ ಆಕೆಯನ್ನ ಕಾಡಿನೊಳಗೆ ಕರೆದುಕೊಂಡು ಹೋಗುತ್ತಾನೆ.
ಇನ್ನು ಕಾಡಿನೊಳಗೆ ತನ್ನ ಗ್ಯಾಂಗ್ ಮೂಲಕ ಕಾಡು ಪ್ರಾಣಿಗಳ ಬೇಟೆಯಾಡುವುದು, ಬೆಲೆಬಾಳುವ ಮರಗಳ ಕಳ್ಳತನ ಮಾಡಿಕೊಂಡಿದ್ದ ಬಾಬು (ಉಗ್ರಂ ಮಂಜು) ಗೆ ದಿವ್ಯಳ ಮೇಲೆ ಕಣ್ಣು ಬೀಳುತ್ತದೆ. ಬಲವಂತವಾಗಿಯಾದರೂ ದಿವ್ಯಳನ್ನು ಮದುವೆಯಾಗಲು ಮುಂದಾಗುತ್ತಾನೆ. ಇದರ ನಡುವೆ ಆಮ್ಮಿಯ ಸೋದರ ಮಾವ ಜಗ್ಗು (ಬಲ ರಾಜವಾಡಿ)ಗೂ ಬಾಬುಗೂ ಕಳ್ಳ ಸಾಗಾಣಿಕೆಯ ವಿಚಾರದಲ್ಲಿ ವೈಷಮ್ಯವಿರುತ್ತದೆ, ಒಬ್ಬರನ್ನೊಬ್ಬರು ಕೊಲ್ಲುವಷ್ಟು ದ್ವೇಷ. ಹೆತ್ತ ಮಗಳ ನೋವು, ಕಷ್ಟ ತಿಳಿದರೂ ಸಹ ಏನನ್ನೂ ಮಾಡಲಾಗದ ಕುಡುಕ ತಂದೆಗೆ ಬಾಬು ಮೇಲೆ ಇನ್ನಿಲ್ಲದ ಕೋಪ. ಇನ್ನು ಕಾಡಿನೊಳಗೆ ಹೋದ ಈ ಮುಗ್ಧ ಪ್ರೇಮಿಗಳನ್ನ ನೋಡಿದ ವ್ಯಕ್ತಿಯೊಬ್ಬ ಗ್ರಾಮದ ಹುಡುಗರಿಗೆ ತಿಳಿಸುತ್ತಾನೆ. ಇದರಿಂದ ಹೊರಬರಲು ಪ್ರವೀಣ ಮಾಡುವ ಪ್ಲಾನ್ ಒಂಡೆಡೆಯಾದರೆ, ಇಕ್ಕಟ್ಟಿಗೆ ಸಿಲುಕಿಕೊಳ್ಳುವ ಆಮ್ಮಿಯನ್ನು ವ್ಯಕ್ತಿಯೊಬ್ಬ ಬಲತ್ಕಾರ ಮಾಡಲು ಮುಂದಾದಾಗ, ಆತನಿಗೆ ಗುಂಡೇಟು ಬಿದ್ದು ಆ ವ್ಯಕ್ತಿ ಅಲ್ಲೇ ಸತ್ತು ಹೋಗುತ್ತಾನೆ. ಆ ಸತ್ತ ವ್ಯಕ್ತಿ ಯಾರು ?ಆತನಿಗೆ ಗುಂಡು ಹೊಡೆದಿದ್ದಾದರೂ ಯಾರು ? ಅರಣ್ಯದಲ್ಲಿ ಸಿಕ್ಕಿಹಾಕಿಕೊಂಡ ಪ್ರೇಮಿಗಳ ಪಾಡು ಏನಾಯಿತು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ಇಂದೇ ಥೇಟರಿಗೆ ಹೋಗಿ ಜಂಗಲ್ ಮಂಗಲ್ ಚಿತ್ರ ವೀಕ್ಷಿಸಿ.
ಇದುವರೆಗೂ ಮಾಡಿರದ ಪಾತ್ರದ ಮೂಲಕ ನಟ ಯಶ್ ಶೆಟ್ಟಿ ಪ್ರೇಕ್ಷಕರ ಗಮನ ಸೆಳೆಯುತ್ತಾರೆ, ನಾಯಕಿ ಹರ್ಷಿತಾ ರಾಮಚಂದ್ರ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ, ಉಗ್ರಂ ಮಂಜು, ಬಲ ರಾಜವಾಡಿ ಕೂಡ ತಂತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ, ಜಂಗಲ್ ಮಂಗಲ್ ಚಿತ್ರದಲ್ಲಿ ಕ್ಯಾಮೆರಾ ವರ್ಕ್ ಹಾಗೂ ಹಿನ್ನೆಲೆ ಸಂಗೀತವೇ ಹೈಲೈಟ್ ಎನ್ನಬಹುದು. ಲವ್, ಸಸ್ಪೆನ್ಸ್ , ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಕಥೆ ಇಷ್ಟಪಡುವವರಿಗಂತೂ ಈ ಚಿತ್ರ ಹೆಚ್ಚಿನ ಮನರಂಜನೆ ನೀಡುತ್ತದೆ.