ಒಂದೇ ಸಿನಿಮಾದಲ್ಲಿ ಫ್ಯಾಮಿಲಿ ಸೆಂಟಿಮೆಂಟ್, ಪಾಲಿಟಿಕ್ಸ್, ಕ್ರೈಮ್ ಹೀಗೆ ಎಲ್ಲ ಅಂಶಗಳನ್ನು ಹೇಳುವ ಪ್ರಯತ್ನ ಈಚೆಗೆ ತೆರೆಕಂಡ ರಾಜದ್ರೋಹಿ ಚಿತ್ರದಲ್ಲಿ ನಡೆದಿದೆ. ನಿರ್ದೇಶಕ ಸಮರ್ಥರಾಜ್ ಒಂದೇ ಜನರೇಶನ್ ಕಥೆಯನ್ನು ಮೂರು ವರ್ಷನ್‌ನಲ್ಲಿ ಹೇಳಿದ್ದಾರೆ.
ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನದಿಂದ ಸ್ಪೂರ್ಥಿಗೊಂಡು ಸಿನಿಮಾ ಮಾಡಹೊರಟ ನಿರ್ದೇಶಕ ಹಲವಾರು ಅಡೆ ತಡೆಗಳನ್ನು ಎದುರಿಸಬೇಕಾಗುತ್ತದೆ.
ಆತ ಜನರನ್ನು ನಂಬಿಸಿ ವಂಚಿಸುವ ರಾಜಕಾರಣಿಗಳ ಬಗ್ಗೆ ನೇರವಾಗಿ ಹೇಳುವ ನಿಷ್ಠೂರವಾದಿಯಾಗಿದ್ದೇ ಇದಕ್ಕೆ ಕಾರಣ. ಆತನ ಚಿತ್ರದ ನೆಗೆಟಿವ್‌ಗಳನ್ನು ಸುಟ್ಟು ಹಾಕೋ ಕೆಲಸವೂ ನಡೆಯುತ್ತದೆ.
ಇನ್ನೊಂದು ಟ್ರ‍್ಯಾಕ್‌ನಲ್ಲಿ ನಾಯಕ ಶಿವು(ಪಟ್ರೆ ಅಜಿತ್) ವೀಸಾ ಮಾಡಿಸಲು ಚೆನ್ನೆ`ಗೆ ಹೋದಾಗ ಅಲ್ಲಿ ಕೆಲಸ ಮಾಡುವ ಪ್ರಿಯಾ(ಮಾನಸಿ)ಳ ಪರಿಚಯವಾಗುತ್ತದೆ, ಪರಿಚಯ ನಂತರ ಪ್ರೇಮಕ್ಕೆ ತಿರುಗುತ್ತದೆ, ಪ್ರಿಯಾ ಶಿವುನನ್ನು ಮನಸಾರೆ ಲವ್ ಮಾಡುತ್ತಾಳೆ, ಆದರೆ ಶಿವುಗೆ ಅದು ಗೊತ್ತಿರಲ್ಲ, ಅದೇ ಕಾರಣದಿಂದ ವೀಸಾ ರೆಡಿಯಾಗಿದ್ರೂ ಶಿವುಗೆ ಕೊಡದೆ ಸತಾಯಿಸುತ್ತಾಳೆ, ಚಿತ್ರದ ಮತ್ತೊಂದು ಟ್ರ‍್ಯಾಕ್‌ನಲ್ಲಿ ನಟ ಅನಂತನಾಗ್ ಹಾಗೂ ಲಕ್ಷ್ಮಿ ಅವರ ಕಥೆ ತೆರೆದುಕೊಳ್ಳುತ್ತದೆ. ಮಂಡ್ಯ ಬಳಿಯ ಹಳ್ಳಿಯೊಂದರಲ್ಲಿ ಜಯಕ್ಕ ಹಾಗೂ ಆಕೆಯ ಇಬ್ಬರು ಮಕ್ಕಳಾದ ಜಯರಾಮ(ಅಭಿಜಿತ್) ಮತ್ತು ಗೌಡ್ರು(ಅಚ್ಯುತ್‌ಕುಮಾರ್) ಕಥೆ ತೆರೆದುಕೊಳ್ಳುತ್ತದೆ, ಹಿರಿಯ ಮಗನ ಪತ್ನಿ ಮಗುವೊಂದರ ತಾಯಿಯೂ ಆದ ಕಾವೇರಿ (ವೀಣಾ ಪೊನ್ನಪ್ಪ) ಊರಜನರಿಗೆ ಹತ್ತಿರವಾಗಿರುತ್ತಾಳೆ, ಆ ಊರಿನ ಪುಡಿ ರಾಜಕಾರಣಿ ನಾಜೂಕಯ್ಯ(ಪಲ್ಲಕ್ಕಿ ರಾಧಾಕೃಷ್ಣ) ಕಾವೇರಿಯ ಜನಪ್ರಿಯತೆಯನ್ನು ಎನ್‌ಕ್ಯಾಷ್ ಮಾಡಿಕೊಳ್ಳಲು ಮುಂದಾಗಿ ಕಿರಿಮಗ ಜಯರಾಮನಿಗೆ ಪಕ್ಷದಿಂದ ಟಿಕೆಟ್ ಕೊಡಿಸುವುದಾಗಿಯೂ, ಮೈದುನ ಪರವಾಗಿ ಕಾವೇರಿ ಮತಯಾಚಿಸಬೇಕೆಂದು ಹೇಳುತ್ತಾನೆ. ಇದಕ್ಕೆ ಒಪ್ಪದ ಕಾವೇರಿಯ ಕುಟುಂಬದ ಮೇಲೆ ನಾಜೂಕಯ್ಯ ಹಲ್ಲೆ ಮಾಡುತ್ತಾನೆ, ತಲೆಗೆ ಬಿದ್ದ ತೀವ್ರ ಪೆಟ್ಟಿನಿಂದಾಗಿ ಕಾವೇರಿ ಹಿಂದಿನದೆಲ್ಲವನ್ನೂ ಮರೆತುಬಿಡುತ್ತಾಳೆ. ಕಾವೇರಿಯ ಮಗು ಅನಾಥಾಶ್ರಮದಲ್ಲಿ ಬೆಳೆಯುತ್ತದೆ.
ರೌಡಿಗ್ಯಾಂಗ್ ಕೊಲೆ ಮಾಡಿದ ಶಿವು ಜೈಲು ಸೇರಬೇಕಾಗುತ್ತದೆ. ಅಲ್ಲಿ ತಾನು ಮಾಡದ ಕೊಲೆ ಆರೋಪದಡಿ, ಜೈಲು ಸೇರಿದ್ದ ಗೌಡ್ರು ಪರಿಚಯವಾಗುತ್ತದೆ. ಶಿವುಗೂ, ಅನಂತನಾಗ್ ಪಾತ್ರಕ್ಕೂ ಏನು ಸಂಬಂಧ ? ಇದೆಲ್ಲದಕ್ಕೂ ಉತ್ತರ ಬೇಕೆಂದರೆ ನೀವೊಮ್ಮೆ ಥೇಟರಿಗೆ ಹೋಗಿ ರಾಜದ್ರೋಹಿ ಚಿತ್ರ ವೀಕ್ಷಿಸಬೇಕು, ಈಗಿನ ಚಿತ್ರರಂಗದಲ್ಲಿ ಪ್ರಾಮಾಣಿಕ ನಿರ್ದೇಶಕ, ನಿರ್ಮಾಪಕರು ಎದುರಿಸುವ ಸಂಕಷ್ಟಗಳನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ, ಈಗಿನ ಜನರ ಅಭಿರುಚಿಗೆ ತಕ್ಕಂತೆ ಚಿತ್ರವನ್ನು ವೇಗವಾಗಿ ನಿರೂಪಿಸಿಕೊಂಡು ಹೋಗಿದ್ದು ಸ್ವಲ್ಪ ಅತ್ತಿತ್ತ ತಿರುಗಿದರೂ ಹಿಂದೇನಾಗಿತ್ತು ಅಂತ ಅರ್ಥವಾಗಲ್ಲ, ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವೂ ಮೂಡಿಬಂದಿದ್ದು, ಎರಡು ಹಾಡುಗಳು ಗುನುಗುವಂತಿವೆ, ಕ್ಯಾಮೆರಾ ವರ್ಕ್ ಕೂಡ ಉತ್ತಮವಾಗಿದೆ, ಶಿವು ಆಗಿ ಅಜಿತ್ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನಂತನಾಗ್ ಲಕ್ಷ್ಮಿ ಅವರು ಹೆಚ್ಚು ಸೀನ್‌ಗಳಲ್ಲಿಲ್ಲದಿದ್ರೂ ಅವರ ಪಾತ್ರಗಳು ಸದಾ ನೆನಪಲ್ಲುಳಿಯುತ್ತವೆ, ನಾಯಕನ ಗೆಳೆಯ ಶಿವು ಆಗಿ ಶರಣ್ ಕಾಮಿಡಿ ಪಾತ್ರ ಸೆಳೆಯುತ್ತದೆ. ರಾಜದ್ರೋಹಿ ಉತ್ತಮ ಮನರಂಜನೆಯ ಚಿತ್ರ ಎನ್ನಬಹುದು.