ವಿಜಯನಗರದ ಕಾಲದ್ದೆನ್ನಲಾದ ನಿಧಿ, ಸಂಪತ್ತನ್ನು ಸಂರಕ್ಷಿಸುವ ಕಥೆಯನ್ನ ಪುನರ್ಜನ್ಮದ ಹಿನ್ನೆಲೆ ಇಟ್ಟುಕೊಂಡು ತೆರೆಮೇಲೆ ನಿರೂಪಿಸಿರುವ ಚಿತ್ರ ಹಚ್ಚೆ ಈವಾರ ತೆರೆಗೆ ಬಂದಿದೆ. ಹಚ್ಚೆಗೂ ಪುನರ್ಜನ್ಮದ ಕಥೆಗೂ ಏನು ಸಂಬಂಧ ಎನ್ನುವುದಕ್ಕೆ ಚಿತ್ರದಲ್ಲಿ ಉತ್ತರವಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಶ್ರೀಕೃಷ್ಣದೇವರಾಯರ ಆಳ್ವಿಕೆಯಲ್ಲಿ ಅಮೂಲ್ಯ ಗ್ರಂಥ ಭಂಡಾರ, ಸಿರಿಸಂಪತ್ತು, ವಜ್ರ ವೈಢೂರ್ಯಗಳ ರಾಶಿಯ ಕುರಿತು ನಾವೆಲ್ಲ ಕೇಳಿದ್ದೇವೆ. ಶತ್ರು ಧಾಳಿಯ ಸಂದರ್ಭದಲ್ಲಿ ರಾಜರು ತಮ್ಮ ಅಮೂಲ್ಯ ಗ್ರಂಥಗಳು, ನಿಧಿ, ಸಂಪತ್ತನ್ನು ಅಜ್ಞಾತ ಸ್ಥಳದಲ್ಲಿ ಸಂರಕ್ಷಿಸಿಟ್ಟಿದ್ದರು ಎನ್ನುವುದನ್ನು ತಿಳಿದು ಅದನ್ನು ಅಪಹರಿಸಲು ಹೊರಟವರ ಹಾಗೂ ಅದನ್ನು ಸಂರಕ್ಷಿಸಲೆಂದು ಹೊರಟ ನಾಯಕನ ನಡುವಿನ ಹೋರಾಟದ ಕಥೆಯನ್ನು ಹಚ್ಚೆ ಚಿತ್ರದ ಮೂಲಕ ನಿರ್ದೇಶಕ ಯಶೋಧರ ಅದ್ಭುತವಾಗಿ ತೆರೆಮೇಲೆ ಮೂಡಿಸಿದ್ದಾರೆ. ಈ ಕಥೆಗೆ ಪುನರ್ಜನ್ಮದ ನಂಟು ಹೇಗೆ ಬೆಸೆದುಕೊಳ್ಳುತ್ತದೆ ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.
ಚಾಚಾ(ಗುರುರಾಜ್ ಹೊಸಕೋಟೆ) ಗ್ಯಾರೇಜ್‌ನಲ್ಲಿ ಸೂರ್ಯ(ಅಭಿಮನ್ಯು) ಒಬ್ಬ ಮೆಕ್ಯಾನಿಕ್. ತಾನಾಯಿತು, ತನ್ನ ಕೆಲಸವಾಯ್ತು ಎಂದಿರೋ ಸೂರ್ಯನಿಗೆ, ವೈರಿಗಳನ್ನುಸೆದೆ ಬಡಿಯೋದೂ ಗೊತ್ತು. ಸಂಸ್ಕೃತಿ(ಆದ್ಯಪ್ರಿಯ) ಒಬ್ಬ ಪತ್ರಕರ್ತೆ. ಸಮಾಜದಲ್ಲಿ ನಡೆಯುವ ದುಷ್ಕೃತ್ಯಗಳ ಬಗ್ಗೆ ಬೆಳಕು ಚೆಲ್ಲುವ ಧ್ಯೇಯ ಹೊಂದಿರುತ್ತಾಳೆ. ಭೂಗತ ಲೋಕದಲ್ಲಿ ತಾನೇ ಕಿಂಗ್ ಎಂದು ಮೆರೆಯತ್ತಿದ್ದ ಉಗ್ರಸೇನಾ, ಆತನ ಚೇಲಾಗಳು ಡ್ರಗ್ಸ್, ಗಾಂಜಾ, ಮಹಿಳೆಯರ ಕಿಡ್ನಾಪ್, ರಿಯಲ್ ಎಸ್ಟೇಟ್ ಮಾಫಿಯಾ ಹೀಗೆ ಹಲವು ಕೃತ್ಯಗಳ ಮೂಲಕ ನಿರಂತರ ತೊಂದರೆ ನೀಡುತ್ತಾರೆ. ಇದು ಪೊಲೀಸ್ ಇಲಾಖೆಗೂ ದೊಡ್ಡ ತಲೆನೋವಾಗುತ್ತದೆ. ವಿಶೇಷ ಸಿಸಿಬಿ ಅಧಿಕಾರಿ ರಣವೀರ್ ಆ ದುಷ್ಟರನ್ನು ಸದೆಬಡಿಯಲು ಮುಂದಾಗುತ್ತಾರೆ. ಸೂರ್ಯ ಹಾಗೂ ಸಂಸ್ಕೃತಿಯ ಸ್ನೇಹ, ಪ್ರೀತಿಯ ನಡುವೆ ಉಗ್ರಸೇನಾನ ತಂಗಿ ಸೋನಿಯಾ (ಅನುಪ್ರೇಮ) ಸೂರ್ಯನನ್ನು ಪ್ರೀತಿಸುತ್ತಾಳೆ. ಈ ನಡುವೆ ಸೂರ್ಯ ಸಿಸಿಬಿ ಅಧಿಕಾರಿಗೆ ಸಾತ್ ನೀಡುತ್ತಾನೆ. ಹಾಗೆಯೇ ಸೋನಿಯಾಳ ಪ್ರೀತಿಯನ್ನು ನಿರಾಕರಿಸುತ್ತಾನೆ. ಇನ್ನು ರಾಜ ಮಹಾರಾಜರ ಬಗ್ಗೆ ವಿಶೇಷ ವರದಿ ಮಾಡಲು
ಇಲ್ಲಿಂದ ಕಥೆ ಮತ್ತೊಂದು ತಿರುವು ಪಡೆದುಕೊಳ್ಳುತ್ತಾ ಹೋಗುತ್ತದೆ. ಸಂಸ್ಕೃತಿಗೆ ಅಗೋಚರ ಶಕ್ತಿಯ ಸಂಚಲನ ಗಾಬರಿ ಮೂಡಿಸುತ್ತದೆ. ಉಗ್ರ ಸೇನಾನಿಗೂ ಕನಸಿನಲ್ಲಿ ಗೋಚರಿಸುವ ಶಕ್ತಿಗೆ ಗುರುವಿನಿಂದ ಸಲಹೆ ಪಡೆದು ಗಂಡಭೇರುಂಡ ಇರುವ ವ್ಯಕ್ತಿಯ ಶಕ್ತಿಯ ಬಗ್ಗೆ ತಿಳಿಯುತ್ತಾನೆ. ಮುಂದೆ ಎದುರಾಗುವ ಒಂದಷ್ಟು ರೋಚಕ ಘಟನೆಗಳು ಆತ್ಮ, ಪುನರ್ಜನ್ಮ, ಚಂದ್ರದ್ರೋಣ ರಹಸ್ಯದ ಸುಳಿವುಗಳನ್ನು ನೀಡುತ್ತಾ ಚಿತ್ರ ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ.
ಪುನರ್ಜನ್ಮದ ಎಳೆಯೊಂದಿಗೆ ವಾಸ್ತವತೆಯ ಬದುಕಿನ ಪ್ರೀತಿ, ವಂಚನೆ, ದುಷ್ಟರ ಚಿತ್ರಣ ಗಮನ ಸೆಳೆಯುತ್ತದೆ. ಚಿತ್ರದ ಕ್ಯಾಮೆರಾ ವರ್ಕ್ ಗಮನ ಸೆಳೆಯುವಂತಿದ್ದು, ನಾಯಕನಾಗಿ ಅಭಿಮನ್ಯು ತನ್ನ ಪಾತ್ರಕ್ಕೆ ಜೀವ ತುಂಬಲು ಸಾಕಷ್ಟು ಎಫರ್ಟ್ ಹಾಕಿದ್ದಾರೆ. ನಾಯಕಿಯಾಗಿ ಆದ್ಯಪ್ರಿಯ ಉತ್ತಮ ಅಭಿನಯ ನೀಡಿದ್ದಾರೆ, ಇತಿಹಾಸದ ಕಾಲ್ಪನಿಕ ವಿಚಾರದೊಂದಿಗೆ ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನುಹೇಳುವ ಹೆಚ್ಚೆಯ ಶಕ್ತಿ, ಪ್ರಭಾವ ಏನೆಂದು ಅರಿಯಲು ಚಿತ್ರವನ್ನು ತೆರೆಯ ಮೇಲೇ ನೋಡಬೇಕು.