Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಹಾಶರಣರನ್ನು ನೋಡಲು ಮರೆಯದಿರಿ
Posted date: 12 Sun, Jan 2014 – 06:40:58 PM

ಚಿತ್ರ: ಮಹಾಶರಣ ಹರಳಯ್ಯ

ನಿರ್ದೇಶನ: ಬಿ.ಎ.ಪುರುಷೋತ್ತಮ್

ಛಾಯಾಗ್ರಹಣ: ಗೌರಿವೆಂಕಟೇಶ್

ತಾರಾಗಣ: ರಮೇಶ್ ಅರವಿಂದ್, ಶ್ರೀಧರ್, ವಿಕ್ರಮ್ ಉದಯ್ ಕುಮಾರ್, ರಮೇಶ್ ಭಟ್, ರಾಮಕೃಷ್ಣ ಮುಂತಾದವರು.


ಈಗ ಬದಲಾಗಿದೆ. ಏನಿದ್ದರೂ ಮಚ್ಚು, ಕೊಚ್ಚು, ಬ್ಲೆಡ್, ಲವ್ವು, ಡ್ಯುಯೇಟ್ ಸೂತ್ರಗಳಿರುವ ಚಿತ್ರಗಳು ಮಾತ್ರ ಚಲಾವಣೆಯಲ್ಲಿವೆ. ಅಂಥ ಚಿತ್ರಗಳನ್ನು ಮಾತ್ರ ಈಗಿನ ಪ್ರೇಕ್ಷಕ ನೋಡಲು ಸಾಧ್ಯ ಎನ್ನುವುದು ಒಂದು ಕಾಮನ್ ಮಾತು. ಹೀಗಾಗಿ ಭಕ್ತಿ, ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳು ಈಗ ಎಲ್ಲೂ ಸಲ್ಲುವುದಿಲ್ಲ. ಅವು ಪ್ರಶಸ್ತಿ, ಸಂವಾದ, ಸೆಮಿನಾರ್ ಗಳಿಗೆ ಮಾತ್ರ ಸೀಮಿತ ಎನ್ನುವ ಕಾಲದಲ್ಲಿ ಮಹಾಶರಣ ಹರಳಯ್ಯ ಚಿತ್ರ ಬಿಡುಗಡೆಯಾಗಿದೆ. ಇದೊಂದು ನಡೆದು ಹೋದು ಒಂದು ಚರಿತ್ರೆಯ ತುಣುಕು ಎಂಬುದು ಎಲ್ಲರಿಗೂ ಗೊತ್ತು. 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದ ಶರಣ ಪರಂಪರೆಯ ದಂಡನಾಯಕನಾಗಿ ಮುಂದುವರೆಸಿದ್ದು ಕ್ರಾಂತಿ ಪುರುಷ, ಕಾಯಕ ಯೋಗಿ, ಸಮಾನತೆಯ ಹರಿಕಾರಕ ಬಸವಣ್ಣ. ಕಲ್ಯಾಣ ಕ್ಷೇತ್ರದಿಂದ ಆರಂಭವಾದ ಅವರ ಈ ಕಾಯಕ, ಕೂಡಲ ಸಂಗಮದವರೆಗೂ ಮುಂದುವರೆಯಿತು.

ಬಸವಣ್ಣನವರ ಈ ಕ್ರಾಂತಿಯ ಹಾದಿಯಲ್ಲಿ ಕಂಡು, ಮುಂದೆ ಮಹಾಶರಣ ಎನಿಸಿಕೊಂಡ ಜೋಡು ಹೊಲಿಯುವ, ಕೀಳು ಜಾತೀಯವ ಎನಿಸಿಕೊಂಡು ಊರಿಂದ ಆಚೆ ಹಾಕಲ್ಪಟ್ಟ ಸಮುದಾಯದ ವ್ಯಕ್ತಿ ಹರಳಯ್ಯ. ಎಲ್ಲರಿಗೂ ಸಮಬಾಳು, ಸಮಪಾಲು, ಮನುಷ್ಯ ಮನುಷ್ಯ ನಡುವೆ ಯಾವುದೇ ರೀತಿಯ ಬೇದ ಭಾವನೆ ಇರಬಾರದು ಎನ್ನುವ ಬಸವ ತತ್ವದಿಂದ ಪ್ರೇರಣೆಯಾಗಿ ತನ್ನ ಊರು ಬಿಟ್ಟು ಕಲ್ಯಾಣ ಕ್ಷೇತ್ರಕ್ಕೆ ಬಂದು ಬಸವಣ್ಣನವರ ದೊಡ್ಡ ಅನುಯಾಯಿಯಾಗಿ ಮುಂದೆ ಮಹಾಶರಣರಾಗಿ ಬೆಳಗಿದ ಹರಳಯ್ಯನ ಕಥೆ ಎಲ್ಲರಿಗೂ ಗೊತ್ತಿರುವುದೇ. ಚರಿತ್ರೆಯಲ್ಲಿ ದಾಖಲಾಗಿ ಹೋಗಿರುವ ಇಂಥ ಐತಿಹಾಸಿಕ ಕಾಲಘಟ್ಟವನ್ನು ನಿರ್ದೇಶಕ ಬಿ.ಎ.ಪುರುಷೋತ್ತಮ್ ಮಹಾಶರಣ ಹರಳಯ್ಯ ಚಿತ್ರದ ಮೂಲಕ ತುಂಬಾ ನೀಟಾಗಿ ಕಟ್ಟಿಕೊಟ್ಟಿದ್ದಾರೆ. ಯಾವುದೇ ವೈಭವೀಕರಣವಿಲ್ಲದೆ, ಚರಿತ್ರೆಯ ಸತ್ಯ ಘಟನೆಗೆ ಚ್ಯುತಿ ಬಾರದಂತೆ ತಮ್ಮ ನಿರ್ದೇಶನದ ಜಾಣ್ಮೆಯನ್ನು ತೋರಿಸಿರುವ ಪುರುಷೋತ್ತಮ್, ಚಿತ್ರದ ನಿಜವಾದ ಪಿಲ್ಲರ್.

 ಸಾಮಾನ್ಯವಾಗಿ ಗೊತ್ತಿಲ್ಲದ ಕಥೆಗಳನ್ನು ಅದ್ಭುತವಾಗಿ ರೂಪಿಸುವುದು ತುಂಬಾ ಸುಲಭದ ಕೆಲಸ. ಆದರೆ, ಗೊತ್ತಿರುವ ಸತ್ಯ ಘಟನೆಗಳನ್ನು ಮತ್ತೆ ಹೇಳಲು ಹೊರಟಾಗಿ ಅಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಇತಿಹಾಸ ಪುರುಷರ ಜೀವನ ಪುಟಗಳನ್ನು ಸಿನಿಮಾ ಮಾಡುವಾಗ ಮೈಯಲ್ಲ ಕಣ್ಣಾಗಿರಬೇಕು. ಅದೇ ಜಾಗೃತಿ ಮನಸ್ಥಿತಿಯಲ್ಲಿ ಪುರುಷೋತ್ತಮ್ ಈ ಚಿತ್ರವನ್ನು ಮಾಡಿದ್ದಾರೆ ಎಂಬುದು ಚಿತ್ರ ನೋಡಿದವರಿಗೆ ತಿಳಿಯುತ್ತದೆ. ಕಥೆ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಜಾತಿ ಹೆಸರಿನಲ್ಲಿ, ನೀನು ಕೀಳು, ನಾನು ಮೇಲು ಎನ್ನುವ ಮನುಷ್ಯ ವಿರೋಧಿ ಪದ್ಧತಿಯನ್ನು ಪಾಲಿಸುತ್ತಿದ್ದ ದಿನಗಳಲ್ಲಿ ಬಸವಣ್ಣ ತಮ್ಮ ಅನುಭವ ಮಂಟಪದಲ್ಲೇ ಗೌರವ ಕುಲದ ರಾಜನ ಮಗಳಿಗೂ, ಹೀನ ಕುಲದವ ಎನಿಸಿಕೊಂಡ ಹರಳಯ್ಯನ ಮಗ ಶೀಲವಂತನಿಗೂ ಮದುವೆ ಮಾಡಿಸುತ್ತಾರೆ. ಇದು ಒಂದು ರೀತಿಯಲ್ಲಿ ಪ್ರೇಮ ವಿವಾಹವಾದರೂ, ಆ ಕಾಲಕ್ಕೆ ಜಾತೀಯ ಕಟ್ಟು ಪಾಡುಗಳನ್ನು ಮೀರಿದ ಅಂತರ್ ಜಾತೀಯ ವಿವಾಹ ಎನ್ನುವ ಚಾರಿತ್ರಿಕ ದಾಖಲೆಗೆ ಕಾರಣವಾಯಿತು. ಆದರೆ, 12ನೇ ಶತಮಾನದಲ್ಲಿ ಇಂಥ ಕ್ರಾಂತಿಕಾರಿ ಬೆಳವಣಿಗೆಯನ್ನು ಸಹಿಸದ ಉನ್ನತ ಜಾತೀಯ ಮಹಾ ಮಂತ್ರಿ ಮತ್ತವರ ತಂಡ,ಬಸವಣ್ಣನವರನ್ನು ಕಲ್ಯಾಣದಿಂದ ಗಡಿಪಾರು ಮಾಡಿಸುವುದಲ್ಲದೆ, ಅಂತರ್ ಜಾತಿ ವಿವಾಹಕ್ಕೆ ಕಾರಣರಾದ ಬ್ರಾಹ್ಮಣ ಜೀತಿಯ ರಾಜ, ಕೆಳ ಜಾತೀಯ ಹರಳಯ್ಯ ಹಾಗೂ ಆತನ ಪುತ್ರನ್ನು ಅನ್ಯಾಯವಾಗಿ ಸಾಯಿಸುತ್ತಾರೆ.

 ಚರಿತ್ರೆಯ ಪುಟಗಳಲ್ಲಿ ನಡೆದು ಹೋದ ಇಂಥ ಅಮಾನುಷವನ್ನು ತೆರೆದಿಡುತ್ತಲೇ ಬಸವಣ್ಣನ ಸಿದ್ಧಾಂತ ಹಾಗೂ ಶರಣ ಪರಂಪರೆಯ ಮಹತ್ವವವನ್ನು ಈ ಚಿತ್ರ ಹೇಳುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ಮುಗಿಯುವ ಮುನ್ನ ಬರುವ ಒಂದಿಷ್ಟು ತುಣುಕುಗಳು ಇಡೀ ಚಿತ್ರದ ಘನತೆಯನ್ನು ಹೆಚ್ಚಿದೆ. ಕಲ್ಯಾಣ ಬಿಟ್ಟ ಬಸವಣ್ಣ ಮುಂದಾನಾದರೂ, ಹರಳಯ್ಯನ ಪತ್ನಿ ಮತ್ತು ಸೊಸೆ ಎಲ್ಲಿ ತೀರಿಕೊಂಡರು, ಹರಳಯ್ಯ ಮತ್ತು ಆತನ ಪತ್ನಿ ಮಾಡಿಕೊಟ್ಟ ಪಾದರಕ್ಷೆಗಳು ಈಗ ಎಲ್ಲಿವೆ ಎಂಬಿತ್ಯಾದಿ ವಿಚಾರಗಳನ್ನು ಹೆಚ್ಚು ಹಿಗ್ಗಿಸದೆ ಸೂಕ್ಷ್ಮವಾಗಿ ಹೇಳಿ ಮುಗಿಸಿರುವುದು ಪುರುಷೋತ್ತಮ್  ಅವರ ತಂತ್ರಗಾರಿಕೆ ಎನ್ನಬೇಕು.

 ಇನ್ನು ಕಲಾವಿದರ ಅಭಿನಯದ ವಿಚಾರಕ್ಕೆ ಬಂದರೆ, ಮೊದಲ ಅಂಕ ನೀಡಬೇಕಿರುವುದು ನಟ ಶ್ರೀಧರ್ ಅವರಿಗೆ. ಹರಳಯ್ಯನಾಗಿ ಇಡೀ ಕಥೆಯಲ್ಲಿ ಅವರು ಅವರಿಸಿಕೊಂಡ ಪರಿ ನೋಡಿದರೆ, ಶ್ರೀಧರ್ ಅವರ ಎಂದಿನ ಕಲಾ ಕೌಶಲ್ಯದಲ್ಲಿ ರವಷ್ಟು ಕೊರೆತೆಯಾಗಿಲ್ಲ ಎನಿಸುತ್ತದೆ. ಆದರಲ್ಲೂ ಭಾವುಕ ಸನ್ನಿವೇಶಗಳಲ್ಲಂತೂ ಶ್ರೀಧರ್ ಅವರಿಗೆ ಶ್ರೀಧರ್ ಅವರೇ ಸಾಟಿ. ನಟ ರಮೇಶ್ ಅರವಿಂದ್, ತಮ್ಮ ಚಹರೆಯಿಂದ ಗಮನ ಸೆಳೆಯುತ್ತಾರೆ. ಬಸವಣ್ಣನಾಗಿ ಅವರು ಮಿಂಚಿದ್ದಾರೆ ಎನ್ನುವುದಕ್ಕಿಂತ ಆ ಪಾತ್ರ ಅವರಿಗೆ ಸೂಕ್ತವಾಗಿದೆ. ಇವರ ನಂತರ ವಿಕ್ರಮ್ ಉದಯ್ ಕುಮಾರ್, ರಾಜನಾಗಿ ರಾಮಕೃಷ್ಣ, ಬ್ರಾಹ್ಮಣ ರಾಜ, ಮಹಾ ಮಂತ್ರಿಯಾಗಿ ರಮೇಶ್ ಭಟ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆಗಾಗ ಬರುವ ಹಾಡುಗಳ ಮೌಲ್ಯವನ್ನು ಸಂಗೀತ ಮತ್ತಷ್ಟು ಹೆಚ್ಚಿಸಿದೆ. ಗೌರಿವೆಂಕಟೇಶ್ ಅವರ ಕ್ಯಾಮೆರಾ ಚಿತ್ರದ ಪ್ರತಿ ದೃಶ್ಯವನ್ನು ನೈಜವಾಗಿ ಕಟ್ಟಿಕೊಡುತ್ತದೆ. ಇಂಥ ಚಿತ್ರಗಳಿಗೆ, ಮೇಕಿಂಗ್ ನಲ್ಲಿ ಅದ್ಧೂರಿತನ, ಬಿಡುಗಡೆ ವ್ಯವಸ್ಥೆಯಲ್ಲಿ ಮಹತ್ವ, ಪ್ರಚಾರ, ಜಾಹೀತಾರು, ಸ್ಟಾರ್ ನಟರು ಇದ್ದುಬಿಟ್ಟರೆ, ನಾವು ಕೂಡ ಬೇರೆ ಭಾಷೆಗಳ ಮುಂದೆ ನಮ್ಮುದೂ ಕೂಡ ಶ್ರೀಮಂತಿಕೆಯ ಸಿನಿಮಾ ಎಂದು ಎದೆ ತಟ್ಟಿಕೊಂಡು ಹೇಳಿಕೊಳ್ಳಬಹುದು. ಆದರೆ, ನಮ್ಮ ಸಿನಿಮಾ ಉದ್ಯಮ ಇಂಥ ಚಿತ್ರಗಳಿಗೆ ಪ್ರಾಮುಖ್ಯತೆ ನೀಡುವ ಕಾಲ ಬರಹುದೇ  ಅಂಥ ಕಾಲ ಬೇಗ ಬರಲಿ. ಮಹಾಶರಣ ಹರಳಯ್ಯನಂಥ ಸದಾಭಿರುಚಿ ಸಿನಿಮಾಗಳು ಮನೆ ಮನೆ ತಲುಪಲಿ ಎನ್ನುವುದು ಚಿತ್ರತಾರ ಡಾಟ್ ಕಾಂನ  ಹಾರೈಕೆ.

- ಚಿತ್ರತಾರ.ಕಾಂ


 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಹಾಶರಣರನ್ನು ನೋಡಲು ಮರೆಯದಿರಿ - Chitratara.com
Copyright 2009 chitratara.com Reproduction is forbidden unless authorized. All rights reserved.