ನಿರ್ದೇಶಕ : ಪ್ರವೀಣ್ ಕುಮಾರ್. ಜಿ
ಸಂಗೀತ : ಕಿರಣ್ ರವೀಂದ್ರನಾಥ್
ಛಾಯಾಗ್ರಹಣ : ಪ್ರವೀಣ್
ತಾರಾಗಣ : ಹರಿ ಶರ್ವಾ , ದೀಪಿಕಾ ಆರಾಧ್ಯ, ಧರ್ಮಣ್ಣ ಕಡೂರು, ಕೃತಿಭಟ್, ರಂಜಿತಾ, ಮಂಜಮ್ಮ ಜೋಗತಿ, ಬಲ ರಾಜವಾಡಿ ಹಾಗೂ ಇತರರು.
ಎರಡು ಹೃದಯಗಳ ಮಧ್ಯೆ ಪ್ರೀತಿ ಅನ್ನೋದು ಎಲ್ಲಿ , ಯಾವಾಗ, ಹೇಗೆ ಶುರುವಾಗುತ್ತೆ ಅನ್ನೋದನ್ನು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಅಮರ ಪ್ರೇಮಿ ಅರುಣನ ವಿಭಿನ್ನ ಪ್ರೇಮಕಥೆಯನ್ನು ನಿರ್ದೇಶಕ ಪ್ರವೀಣ್ ಕುಮಾರ್ ಅಷ್ಟೇ ಸುಂದರವಾಗಿ ತೆರೆಮೇಲೆ ಮೂಡಿಸಿದ್ದಾರೆ. ಚಿತ್ರದ ನಾಯಕ ಅರುಣ್(ಹರಿಷರ್ವಾ) ತನ್ನ ಬಾಲ್ಯದ ಗೆಳತಿಯಿಂದ ದೂರವಾಗಿರುತ್ತಾನೆ. ಆಕೆಯ ನೆನಪಿನಲ್ಲಿಯೇ ಬೆಳೆದು ಮತ್ತೆ ಆಕೆಯ ಹುಡುಕಾಟ ನಡೆಸೋ ಹಾದಿಯಲ್ಲಿ ಎದುರಾಗುವ ಅಡೆ ತಡೆಗಳನ್ನ ದಾಟಿ ಮುಂದೆ ಸಾಗುವ ಆತನ ಪ್ರಾಮಾಣಿಕ ಪ್ರೀತಿಗೆ ಗೆಲುವು ಸಿಕ್ಕಿತೇ ಇಲ್ಲವೇ ಎನ್ನುವುದೇ ಈ ವಾರ ತೆರಗೆ ಬಂದಿರುವ "ಅಮರ ಪ್ರೇಮಿ ಅರುಣ್" ಚಿತ್ರದ ಕಥಾಹಂದರ.
ಮೆಡಿಕಲ್ ರೆಪ್ರೆಸೆಂಟೇಟಿವ್ ಅರುಣ್ ತನ್ನ ತಂದೆ, ತಾಯಿ, ಅಜ್ಜಿಯ ಆಸರೆಯಲ್ಲಿ ಬೆಳೆದ ಹುಡುಗ. ಶಾಲಾ ದಿನಗಳಲ್ಲಿ ಕಾವ್ಯ (ದೀಪಿಕಾ ಆರಾಧ್ಯ) ಎಂಬ ಹುಡುಗಿಯನ್ನು ಇಷ್ಟಪಟ್ಟಿರುತ್ತಾನೆ. ನಂತರ ಊರನ್ನು ಬಿಟ್ಟು ಹೋದ ಕಾರಣ ಆಕೆಯ ಸಂಪರ್ಕ ಕಳೆದುಕೊಳ್ಳುತ್ತಾನೆ. ಇತ್ತ ಈತನ ಮನೆಯಲ್ಲಿ ಮಗನ ಮದುವೆ ಮಾಡಲು ಮುಂದಾಗಿ ಹುಡುಗಿಯರ ಫೋಟೋಗಳನ್ನು ತೋರಿಸುತ್ತಾರೆ. ಆದರೆ ಯಾವುದೇ ಹುಡುಗಿ ಅರುಣನಿಗೆ ಇಷ್ಟವಾಗಲ್ಲ. ಈತನ ಗೆಳೆಯ ಸೀನಾ (ಧರ್ಮಣ್ಣ), ಪ್ರೇಮಿಗಳನ್ನು ಒಂದು ಮಾಡುವುದೇ ಇವರಿಬ್ಬರ ಕಾಯಕ. ಸೀನನ ಪ್ರೀತಿಗೆ ಸಹಾಯ ಮಾಡಲು ಹೋದ ಅರುಣನಿಗೆ ಬಾಲ್ಯದ ಗೆಳತಿ ಕಾವ್ಯ ಇರುವ ಸ್ಥಳ ತಿಳಿಯುತ್ತದೆ. ಆಕೆಯನ್ನು ಹುಡುಕಿಕೊಂಡು ಅವರ ಮನೆಗೆ ಹೋಗುವ ಅರುಣ್ ಹಾಗೂ ಸೀನನಿಗೆ ಕಾವ್ಯ ಪ್ರೀತಿಸಿದ ಹುಡುಗನ ಜೊತೆ ಓಡಿ ಹೋಗಿದ್ದಾಳೆಂಬ ವಿಷಯ ತಿಳಿಯುತ್ತದೆ. ಇದರಿಂದ ವಜಚಲಿತನಾದ ಅರುಣ್ ಗೆ ಮುಂದೇನು ಎಂಬ ಪ್ರಶ್ನೆ ಕಾಡುತ್ತದೆ. ಕಾವ್ಯಳ ಆ ಪ್ರೇಮಿ ಯಾರು...
ಅರುಣ್ ಗೆ ತನ್ನ ಪ್ರೀತಿ ಸಿಗುತ್ತಾ, ಇಲ್ವಾ ಎಂಬುದಕ್ಕೆ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಉತ್ತರ ಸಿಗುತ್ತದೆ.
ನಿರ್ದೇಶಕ ಪ್ರವೀಣ್ ಕುಮಾರ್ ಒಂದು ನಿಷ್ಕಲ್ಮಶ ಪ್ರೀತಿಯ ಕಥಾನಕವನ್ನು ನೇರವಾಗಿ ಪ್ರೇಕ್ಷಕರ ಮುಂದೆ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಇದು ಬಳ್ಳಾರಿ ಭಾಗದಲ್ಲಿ ನಡೆಯುವ ಪ್ರೇಮ ಕಥೆಯಾಗಿದ್ದು, ಅಲ್ಲಿನ ಭಾಷೆ, ಜನರ ನಡೆ-ನುಡಿಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ.
ಪ್ರೀತಿಸುವ ಹೃದಯಗಳಿಗೆ ನಂಬಿಕೆಯೇ ಶಕ್ತಿ ಎಂಬುದನ್ನು ಅಮರಪ್ರೇಮಿ ಅರುಣ್ ಚಿತ್ರದ ಮೂಲಕ ಹೇಳಿದ್ದಾರೆ. ಪ್ರೀತಿಸಿದವರ ಹೃದಯಗಳಿಗೆ ಈ ಚಿತ್ರ ಖಂಡಿತ ಮುಟ್ಟುವಂತಿದೆ. ಚಿತ್ರದಲ್ಲಿ ಹಾಡುಗಳನ್ನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು. ಛಾಯಾಗ್ರಾಹಕರ ಕೈಚಳಕ ಸೊಗಸಾಗಿದೆ. ಹಾಗೆಯೇ ಸಂಭಾಷಣೆ, ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡ ಶ್ರಮವಹಿಸಿರುವುದು ಎದ್ದು ಕಾಣುತ್ತದೆ ನಾಯಕ ಅರುಣ್ ಪಾತ್ರದಲ್ಲಿ ಹರಿಶರ್ವಾ ಸೊಗಸಾಗಿ ಅಭಿನಯಿಸಿದ್ದಾರೆ. ಒಬ್ಬ ಪ್ರೇಮಿಯ ಪರದಾಟವನ್ನು ಇವರ ಪಾತ್ರದ ಮೂಲಕ ತೋರಿಸಲಾಗಿದೆ. ಅದೇ ರೀತಿ ನಾಯಕಿ ಕಾವ್ಯಳಾಗಿ ದೀಪಿಕಾ ಆರಾಧ್ಯ ಕೂಡ ಲೀಲಾಜಾಲವಾಗಿ ತನ್ನ ಪಾತ್ರವನ್ನು ನಿರ್ವಹಿಸಿದ್ದು, ತನ್ನ ಮಾತಿನ ವರ್ಚಸಲ್ಲೇ ಸೆಳೆಯುತ್ತಾ , ಮುದ್ದು ಮುದ್ದಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಗೆಳೆಯನಾಗಿ ಧರ್ಮಣ್ಣ ತನ್ನ ಚಟಪಟ ಮಾತುಗಳ ಮೂಲಕ ಗಮನ ಸೆಳೆಯುತ್ತಾರೆ. ಪ್ರೀತಿಯ ದಾರಿ ಕಂಡುಕೊಳ್ಳುವ ಜೊತೆ ಗೆಳತಿಯೊಂದಿಗೆ ಹಾಡಿ ಕುಣಿದಿದ್ದಾರೆ. ಉಳಿದಂತೆ ಅರ್ಚನಾ ಕೊಟ್ಟಿಗೆ, ಕೃತಿ ಭಟ್ ಪಾತ್ರಗಳು ಕೂಡ ಗಮನ ಸೆಳೆದಿದ್ದು , ಬಿ.ಮಂಜಮ್ಮ ಜೋಗತಿ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಉಳಿದಂತೆ ಎಲ್ಲಾ ಪಾತ್ರಧಾರಿಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.