Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹುಬ್ಬಳ್ಳಿಯಲ್ಲಿ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಅನಾವರಣವಾಯಿತು ``ಎಲ್ಟು ಮುತ್ತಾ`` ಚಿತ್ರದ ಹಾಡುಗಳ ಬಿಡುಗಡೆ
Posted date: 07 Mon, Jul 2025 03:17:10 PM
HIGH 5 ಸ್ಟುಡಿಯೋಸ್ ಲಾಂಛನದಲ್ಲಿ ಸತ್ಯ ಎಸ್. ಶ್ರೀನಿವಾಸನ್ ನಿರ್ಮಿಸಿರುವ, ರಾ.ಸೂರ್ಯ ನಿರ್ದೇಶನದ ಹಾಗೂ ಶೌರ್ಯ ಪ್ರತಾಪ್, ರಾ.ಸೂರ್ಯ, ಪ್ರಿಯಾಂಕ ಮಳಲಿ ಮುಂತಾದವರು ಅಭಿನಯಿಸಿರುವ `ಎಲ್ಟು ಮುತ್ತಾ`ಚಿತ್ರಕ್ಕಾಗಿ ಪ್ರಸನ್ನ ಕೇಶವ ಸಂಗೀತ ಸಂಯೋಜಿಸಿರುವ ಹಾಡುಗಳ ಬಿಡುಗಡೆ ಸಮಾರಂಭ ಹಾಗೂ ಚಿತ್ರದ ಪತ್ರಿಕಾಗೋಷ್ಠಿ ಇತ್ತೀಚೆಗೆ ಹುಬ್ಬಳ್ಳಿಯ ರಾಯಲ್ ರಿಟ್ಜ್ ರೆಸಾರ್ಟ್‌ ನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ 50 ವರ್ಷ ಪೂರೈಸಿದ ನಾಡಿನ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಉಪ್ಪಿನ ಬೆಟಗೇರಿ ಪರಮಪೂಜ್ಯ ಶ್ರೀ ಕುಮಾರ ವಿರೂಪಾಕ್ಷ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‍ ಬಣಕಾರ್, ಪೊಲೀಸ್ ಅಧಿಕಾರಿ ಅನಿಲ್ ಕಮಾರ್ ಭೂಮರಡಿ, ಹಿರಿಯ ವಕೀಲರು ಹಾಗೂ ಸಮಾಜ ಸೇವಕರಾದ ಪಾಂಡುರಂಗ ಎಚ್ ನೀರಳಕೇರಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

ಪ್ರಸನ್ನ ಕೇಶವ ಅವರು ನನ್ನ ಶಿಷ್ಯ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ‌ ಎಂದು ಮಾತನಾಡಿದ ಗಾಯಕಿ ಸಂಗೀತ ಕಟ್ಟಿ,  ಅವರು ಬಹಳ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಅವರಿಗೆ ಯಾವಾಗ ಫೋನ್‍ ಮಾಡಿದರೂ ಸ್ಟುಡಿಯೋದಲ್ಲಿ ಕೆಲಸದಲ್ಲಿ ನಿರತರಾಗಿರುತ್ತಿದ್ದರು. ಚಿತ್ರ ಯಶಸ್ವಿಯಾಗಲಿ. L2 ಅಂದರೆ Latitude, Longitude (ಅಕ್ಷಾಂಶ, ರೇಖಾಂಶ) ಎಂದರ್ಥ. `ಎಲ್ಟು ಮುತ್ತಾ` ಚಿತ್ರ ಸಹ ದೇಶದ, ಪ್ರಪಂಚದ ಉದ್ಧಗಲಕ್ಕೂ ಹೆಸರು ಮಾಡಲಿ‌ ಹಾರೈಸಿದರು.

ಇದು ಬರೀ ಕೊಡಗಿನ ಕಥೆಯಲ್ಲ. ಕೊಡಗಿನ ಕಥೆಯನ್ನು ಇಡೀ ಕರ್ನಾಟಕಕ್ಕೆ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಈ ಚಿತ್ರವನ್ನು ನಾವು ಯಾವ ಸ್ಟಾರ್ ನಟರನ್ನು ಗಮನದಲ್ಲಿಟ್ಟುಕೊಂಡು ಮಾಡಲಿಲ್ಲ. ಚಿತ್ರಕ್ಕೂ ಮೊದಲು ಒಂದು ಟೀಸರ್ ಚಿತ್ರೀಕರಣ ಮಾಡಿದ್ದೆವು. ಆ ಟೀಸರ್ ನೋಡಿದ ಮೇಲೆ ಮುತ್ತನ ಪಾತ್ರವನ್ನು ಶೌರ್ಯ ಪ್ರತಾಪ್‍ ಬಿಟ್ಟು ಬೇರೆ ಯಾರೂ ಮಾಡಲು ಅಸಾಧ್ಯ ಎಂದನಿಸಿತು. ಆ ಟೀಸರ್ ನೋಡಿ ಸತ್ಯ ಶ್ರೀನಿವಾಸನ್‍ ಅವರು ನಮ್ಮ ಜೊತೆಗೆ ನಿಂತರು. ನಾನು ಮೂಲತಃ ಕೊಡಗಿನವನು. ನಾನು ಈ ಜನರನ್ನು ನೋಡಿದ್ದೇನೆ. ಕೆಲವರು ಬದುಕಿದ್ದಾರೆ. ಇನ್ನೂ ಕೆಲವರು ಈಗಿಲ್ಲ. ಅವರ ಜೀವನವನ್ನು ಹೇಳುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಿದ್ದೇನೆ. ಸುಮಾರು 55 ದಿನಗಳ ಕಾಲ ಕೊಡಗಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಒಂದು ಹಾಡನ್ನು ಕನಕಪುರದ ಬಳಿ ಚಿತ್ರೀಕರಿಸಲಾಗಿದೆ ಎಂದು ನಿರ್ದೇಶಕ ಹಾಗೂ ಎಲ್ಟು ಪಾತ್ರಧಾರಿ ರಾ.ಸೂರ್ಯ ತಿಳಿಸಿದರು.

ಜುಲೈ 16ರಂದು ಬೆಂಗಳೂರಿನಲ್ಲಿ ಟ್ರೇಲರ್ ಬಿಡುಗಡೆ ಮಾಡುತ್ತಿದ್ದೇವೆ. ಜುಲೈ ಕೊನೆಯ ಅಥವಾ ಆಗಸ್ಟ್ ಮೊದಲವಾರದಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ಟ್ರೇಲರ್ ನಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲಾಗುವುದು ಎಂದರು ನಿರ್ಮಾಪಕ ಸತ್ಯ ಶ್ರೀನಿವಾಸನ್. .
 
ಈ ಚಿತ್ರದಲ್ಲಿ ನನ್ನದು ನೆಗೆಟಿವ್ ಶೇಡ್‍ ಪಾತ್ರ ಎಂದು ತಿಳಿಸಿದ ನಟ ಕಾಕ್ರೋಜ್ ಸುಧೀ, ಚಿತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಇದೊಂದು ಹೊಸ ತಂಡ ಎಂದನಿಸುವುದಿಲ್ಲ. ಇವರ ಸಿನಿಮಾ ಪ್ರೀತಿ ನೋಡಿದರೆ, ಇವರು ಹೊಸಬರು ಎಂದನಿಸುವುದಿಲ್ಲ. ಕೆಲಸ ಮಾಡುತ್ತಾ ಮಾಡುತ್ತಾ ಸಾಕಷ್ಟು ಕಲಿತಿದ್ದಾರೆ‌ ಎಂದರು.

ನಾನು ಸತ್ಯ ಅವರು ಹಳೆಯ ಸ್ನೇಹಿತರು. ಒಮ್ಮೆ ಮಾತನಾಡುವಾಗ, ಈ ಚಿತ್ರದ ಪ್ರಸ್ತಾಪವಾಯಿತು. ನನಗೂ ಈ ಚಿತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದನಿಸಿದ್ದರಿಂದ ತಂಡ ಜೊತೆಯಾದೆ. ನಾನು ಈ ಚಿತ್ರ ನೋಡಿದ್ದೇನೆ. ಚಿತ್ರ ಮೂಡಿಬಂದಿರುವ ರೀತಿ ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳನ್ನು ಮಾಡುವಾಸೆ ಇದೆ ಎಂದರು ಸಹ ನಿರ್ಮಾಪಕ ಪವೀಂದ್ರ ಮುತ್ತಪ್ಪ.
 
ನಾನು ಬರವಣಿಗೆ ಹಂತದಲ್ಲೇ ತೊಡಗಿಸಿಕೊಂಡಿದ್ದೆ. ನಾನು ಹೊಸಬ. ಇದು ಮೊದಲ ಚಿತ್ರ. ಯಾವುದೇ ರೀತಿಯ ಅನುಭವವಿಲ್ಲ. ನಟನೆ ಬಗ್ಗೆ ಆಸಕ್ತಿ ಇತ್ತು. ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದೆ. ಈ ಚಿತ್ರದ ಮೂಲಕ ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತು. ಚಿತ್ರದಲ್ಲಿ ನಾನು ಮುತ್ತನ ಪಾತ್ರದಲ್ಲಿ ನಟಿಸಿದ್ದೇನೆ ಎನ್ನುವದಕ್ಕಿಂತ ಮುತ್ತನಾಗಿ ಜೀವಿಸಿದ್ದೇನೆ. ಪಾತ್ರಕ್ಕೆ ದೈಹಿಕವಾಗಿ ತಯಾರಾಗುವುದಕ್ಕಿಂತ ಮಾನಸಿಕವಾಗಿ ಸಾಕಷ್ಟು ತಯಾರಿ ನಡೆಸಿದ್ದೇನೆ ಎಂದು ನಾಯಕ ಶೌರ್ಯ ಪ್ರತಾಪ್ ಹೇಳಿದರು. 
 
ಕೊಡಗಿನಲ್ಲಿ ಇಂಥದ್ದೊಂದು ಜನಾಂಗ ನನಗೆ ಗೊತ್ತಿರಲಿಲ್ಲ. ನಿರ್ದೇಶಕರು ಹೇಳಿದ ಮೇಲೆ ಗೊತ್ತಾಗಿದ್ದು. ಈ ಪಾತ್ರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸುಮಾರು ಮೂರು ದಿನಗಳ ಕಾಲ ಬೇಕಾಯಿತು. ನಾಲ್ಕನೇ ದಿನ ನಾನೇ ಪಾತ್ರವಾಗಿ ಹೋದೆ. ಸಿನಿಮಾಗಾಗಿ ಒಂದೂವರೆ ತಿಂಗಳ ಕಾಲ ಸತತ ಚಿತ್ರೀಕರಣ ಮಾಡಿದ್ದೇವೆ. ಬೆಂಗಳೂರಿಗೆ ವಾಪಸ್ಸಾದ ನಂತರ ಆ ಗುಂಗಿನಿಂದ ಹೊರಬರುವುದಕ್ಕೆ ಸಾಧ್ಯವಾಗಲಿಲ್ಲ. ಚಿತ್ರದಿಂದ ತುಂಬಾ ಕಲಿತಿದ್ದೇನೆ. ನನಗೆ ಇಂಥದ್ದೊಂದು ಅವಕಾಶ ಕೊಟ್ಟ ತಂಡದವರಿಗೆ ನಾನು ಆಭಾರಿ ಎಂದು ನಾಯಕಿ ಪ್ರಿಯಾಂಕ ಮಳಲಿ ತಿಳಿಸಿದರು. 
 
ಗುರುಗಳಾದ ಸಂಗೀತ ಕಟ್ಟಿ ಅವರ ಸಮ್ಮುಖದಲ್ಲಿ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸಂಗೀತ ನಿರ್ದೇಶಕ ಪ್ರಸನ್ನ ಕೇಶವ, ಹಾಡುಗಳ ಬಗ್ಗೆ ಮಾಹಿತಿ ನೀಡಿದರು‌. ನಟಿ ಬೇಬಿ ಪ್ರಿಯ, ನಟ , ಕಾರ್ಯಕಾರಿ ನಿರ್ಮಾಪಕ ರುಹಾನ್ ಆರ್ಯ ಹಾಗೂ ಹಿರಿಯ ನಟ ನವೀನ್ ಪಡೀಲ್ ಸೇರಿದಂತೆ  "ಎಲ್ಟು ಮುತ್ತಾ" ಚಿತ್ರತಂಡದ ಅನೇಕ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹುಬ್ಬಳ್ಳಿಯಲ್ಲಿ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಅನಾವರಣವಾಯಿತು ``ಎಲ್ಟು ಮುತ್ತಾ`` ಚಿತ್ರದ ಹಾಡುಗಳ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.