ಪ್ರೇಮಿಗಳು, ಸತಿ ಪತಿಗಳಾಗಬೇಕೆಂದರೆ ಬರೀ ದೇಹಗಳು ಒಂದಾದರೆ ಸಾಲದು, ಮೊದಲು ಅವರಿಬ್ಬರ ರುಚಿ, ಅಭಿರುಚಿ, ಪ್ರಪಂಚವನ್ನು ನೋಡುವ ದೃಷ್ಟಿಕೋನ ಒಂದೇ ಆಗಿರಬೇಕು. ಒಬ್ಬರ ಮನಸನ್ನು ಮತ್ತೊಬ್ಬರು ಅರ್ಥ ಮಾಡಿಕೊಂಡಿರಬೇಕು. ಆಗಷ್ಟೇ ಅವರು ಸಂಸಾರದಲ್ಲಿ ಸಾರ್ಥಕ ಜೀವನ ನಡೆಸಲು ಸಾಧ್ಯ. ಇಂಥ ವಿಶಿಷ್ಠ ಕಥೆಯನ್ನು ಹೊತ್ತು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ದೂರ ತೀರ ಯಾನ". ಪ್ರೇಮಿಗಳಿಬ್ಬರ ಕಥೆಯ ಮೂಲಕ ಎಲ್ಲಾ ಲವರ್ಸ್ಗೆ ಒಂದು ಮೆಸೇಜನ್ನು ನಿರ್ದೇಶಕ ಮಂಸೋರೆ ನೀಡಿದ್ದಾರೆ.
ಒಂದಷ್ಟು ಗೆಳೆಯರೇ ಸೇರಿ ತಮ್ಮದೇ ಆದ ಮ್ಯೂಸಿಕ್ ಬ್ಯಾಂಡ್ ಕಟ್ಟಿಕೊಂಡೊರುತ್ತಾರೆ. ಆ ತಂಡದಲ್ಲಿ ಗಾಯಕನಾದ ಆಕಾಶ್(ವಿಜಯ್ ಕೃಷ್ಣ)ಗೆ ವಯಲಿನ್ ನುಡಿಸುವುದು ಹವ್ಯಾಸ.
ಇದೇ ತಂಡದಲ್ಲಿ ಫ್ಲೂಟ್ ನುಡಿಸುವ ಬೆಡಗಿ ಭೂಮಿ (ಪ್ರಿಯಾಂಕ ಕುಮಾರ್). ಇವರಿಬ್ಬರ ನಡುವಿನ ಸ್ನೇಹ, ಪ್ರೀತಿಗೆ ಐದು ವರ್ಷ ತುಂಬಿದರೂ ಇನ್ನೂ ಮದುವೆಯಾಗಿರಲ್ಲ, ಆದರೆ ಇವರಿಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿರುತ್ತಾರೆ. ಇವರ ತದ್ವಿರುದ್ದ ನಡವಳಿಕೆ ಇಬ್ಬರ ಮದುವೆಗೂ ಅಡ್ಡಿಯಾಗಿರುತ್ತದೆ. ಇದನ್ನ ಸರಿಪಡಿಸಿಕೊಳ್ಳಲು ಒಂದು ವಾರ ಇಬ್ಬರೇ ಲಾಂಗ್ ಜರ್ನಿ ಹೊರಡಲು ನಿರ್ಧರಿಸುತ್ತಾರೆ.ಈ ಒಂದು ಪಯಣದ ಹಾದಿಯಲ್ಲಿ ಇವರಿಬ್ಬರದು ಬೇರೆಯದೆ ನಿಲುವು. ಅಕಾಶ್ ಇಷ್ಟ ಪಡುವ ಸ್ಥಳ, ನಡೆಕೊಳ್ಳುವ ರೀತಿ ಕೆಲವೊಮ್ಮೆ ಭೂಮಿಗೂ ಇಷ್ಟವಾಗುವುದಿಲ್ಲ, ಅದೇ ರೀತಿ ಭೂಮಿಯ ವರ್ತನೆಯು ಆಕಾಶ್ ಮನಸ್ಸಿಗೆ ನೋವುಂಟು ಮಾಡುತ್ತಿರುತ್ತದೆ.
ಇದರ ನಡುವೆ ಒಂದಷ್ಟುವಿಶೇಷ ಸ್ಥಳಗಳು, ವ್ಯಕ್ತಿಗಳ ಪರಿಚಯ ಕೂಡ ಇವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸು ಒಲಿಸಿಕೊಳ್ಳುವುದರ ಜೊತೆಗೆ ಮನವರಿಕೆಗೂ ದಾರಿ ಮಾಡಿಕೊಟ್ಟು ಸಾಗುವ ಹಾದಿಯಲ್ಲಿ ಈ ಇಬ್ಬರು ಪ್ರೇಮಿಗಳು ಕಂಡುಕೊಳ್ಳುವ ಸತ್ಯ ಏನು... ಸಾಗುವ ದಾರಿ ಯಾವುದು... ಸ್ಪಷ್ಟತೆಯ ಬದುಕು ಯಾವುದು... ಕೈಮಾಕ್ಸ್ ನೀಡುವ ಉತ್ತರ ಏನು... ಎಂಬುದನ್ನು ತಿಳಿಯಲು ಒಮ್ಮೆ ನೀವು ಈ ಚಿತ್ರವನ್ನು ಥೇಟರಿಗೆ ಹೋಗಿ ನೋಡಬೇಕು.
ನಿರ್ದೇಶಕ ಮಂಸೋರೆ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಪ್ರಸ್ತುತ ಕಾಲಘಟ್ಟಕ್ಕೆ ಹೇಳಿ ಮಾಡಿಸಿದಂತಿದೆ. ಗೆಳೆತನ, ಪ್ರೀತಿ, ವಿಚ್ಛೇದನ, ಲಿವಿಂಗ್ ರಿಲೇಶನ್ಶಿಪ್ ಹೀಗೆ ಒಂದಷ್ಟು ಸಂಬಂಧಗಳಿಗೆ ಬೇಲಿ ಹಾಕಿಕೊಂಡು ಜೀವನ ನಡೆಸುವವರ ಲೈಫಲ್ಲಿ ಎದುರಾಗುವ ಸಮಸ್ಯೆಗಳ ನಡುವೆ ನಮ್ಮನ್ನ ನಾವು ಕಂಡುಕೊಳ್ಳುವುದು ಹೇಗೆ ಎಂಬುದನ್ನು ಕೂಡ ದೂರತೀರ ಯಾನ ಹೇಳುತ್ತದೆ.
ಗಮನ ಸೆಳೆಯುವ. ಫೋಟೋಗ್ರಫಿ ಈ ಚಿತ್ರದ ಹೈಲೈಟ್. ಇದೊಂದು ಮನಸಿಗೆ ಮುದ ನೀಡುವ, ಕಣ್ಣಿಗೆ ತಂಪನ್ನೀಯುವ ಸುಂದರ ಪ್ರೇಮಕಾವ್ಯ ಎನ್ನಬಹುದು.
ನಿರ್ಮಾಪಕರ ಆರ್. ದೇವರಾಜ್ ಅವರು ಮಂಸೋರೆ ಕನಸಿಗೆ ಜತೆಯಾಗಿ ಸಾಥ್ ನೀಡಿದ್ದಾರೆ.
ಇಡೀ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಹಾಡುಗಳು ಕೇಳಲು ಇಂಪಾಗಿದ್ದು ಮನಸಲ್ಲುಳಿಯುತ್ತವೆ. ಟಿ. ಪಿ. ಕೈಲಾಸಂ ಅವರ ಕೋಳಿಕೆ ರಂಗ ಹಾಡಿಗೆ ಹೊಸ ಲಿರಿಕ್ ಸಂಯೋಜನೆ ಮಾಡಿರುವುದು ಇಷ್ಟವಾಗುತ್ತದೆ. ಅನೇಕ ಸುಂದರ ತಾಣಗಳನ್ನು ಅಷ್ಟೇ ಸುಂದರವಾಗಿ ತೋರಿಸಿರುವ ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದೆ. ಸಂಕಲನವೂ ಚಿತ್ರಕಥೆಗೆ ಪೂರಕವಾಗಿದೆ. ಇನ್ನು ನಾಯಕ ವಿಜಯ್ ಕೃಷ್ಣ ನೈಜ ಅಭಿನಯದ ಮೂಲಕ ಪಾತ್ರಕ್ಜೆ ಜೀವ ತುಂಬಿದ್ದಾರೆ. ಅದೇ ರೀತಿ ನಾಯಕಿ ಪ್ರಿಯಾಂಕಾ ಕುಮಾರ್ ಕೂಡ ಈಗಿನ ಕಾಲದ ನೂರಾರು ಯುವತಿಯರ ಪ್ರತಿರೂಪವಾಗಿ ಸಹಜಾಭಿನಯದ ಮೂಲಕ ಪಾತ್ರಕ್ಜೆ ಜೀವ ತುಂಬಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರಗಳಲ್ಲಿ ಶ್ರುತಿ ಹರಿಹರನ್, ಶರತ್ ಲೋಹಿತಾಶ್ವ, ಅರುಣ್ ಸಾಗರ್, ಸುಧಾ ಬೆಳವಾಡಿ, ಸೇರಿದಂತೆ ಹಲವಾರು ಕಲಾವಿದರು ಚಿತ್ರದ ಓಟಕ್ಕೆ ಸಾಥ್ ನೀಡಿದ್ದಾರೆ. ಈಗಿನ ಕಾಲದ ಮೆಟ್ರೋ ಸಿಟಿ ಯುವಕ, ಯುವತಿಯರ ಲೈಫ್ ಹೇಗಿರುತ್ತೆ ಎಂಬುದನ್ನು ನಿರ್ದೇಶಕರು ಈ ಚಿತ್ರದಲ್ಲಿ ಕಣ್ಣಿಗೆ ಕಟ್ಟುವ ಹಾಗೆ ತೆರೆದಿಟ್ಟಿದ್ದಾರೆ.