ಚಿತ್ರ: ಫಸ್ಟ್ ಡೇ ಫಸ್ಟ್ ಶೋ
ನಿರ್ಮಾಣ: ಊರ್ಮಿಳಾ
ನಿರ್ದೇಶನ: ಗಿರೀಶ್.ಜಿ
ತಾರಾಗಣ: ಗಿರೀಶ್, ಜೀವಿತಾ ವಸಿಷ್ಟ, ರೋಹಿತ್ ಅನಿರುದ್ಧ ಶಾಸ್ತ್ರಿ, ಬಿ.ಎಂ. ವೆಂಕಟೇಶ್, ಹರೀಶ್ ಅರಸು, ರೇಷ್ಮಾ, ಲಿಂಗರಾಜಪ್ಪ ಹಾಗೂ ಇತರರು.
ಒಂದು ಸಿನಿಮಾ ರೆಡಿಯಾದ ನಂತರ ಅದು ಬಿಡುಗಡೆಯಾಗುವ ಹಂತದಲ್ಲಿ ಏನೇನೆಲ್ಲ ನಡೆಯುತ್ತದೆ, ಅಡೆ ತಡೆಗಳು ಎದುರಾಗುತ್ತವೆ, ಆ ಚಿತ್ರತಂಡ ಮೊದಲ ದಿನ ಫಸ್ಟ್ ಶೋ ಆಗೋವರೆಗೆ ನಿರ್ಮಾಪಕ, ನಿರ್ದೇಶಕ ಎದುರಿಸುವ ತೊಂದರೆಗಳೇನು ಎಂಬುದನ್ನು ನಿರ್ದೇಶಕ ಗಿರೀಶ್ ಅವರು ತುಂಬಾ ನೈಜವಾಗಿ ತೆರೆಮೇಲೆ ತಂದಿದ್ದಾರೆ.
ಒಂದು ಸಿನಿಮಾಗಾಗಿ ವರ್ಷ, ಎರಡು ವರ್ಷ ಕಷ್ಟಪಟ್ಟು, ತಮ್ಮತನು, ಮನ, ಧನ ಎಲ್ಲವನ್ನೂ ಧಾರೆ ಎರೆದಿರುತ್ತಾರೆ. ಅದೆಲ್ಲದರ ಫಲವನ್ನು ಫಸ್ಟ್ ಡೇ ಫಸ್ಟ್ ಶೋನಲ್ಲಿ ಜನರ ಪ್ರತಿಕ್ರಿಯೆ ಮೂಲಕ ಗಳಿಸುತ್ತಾರೆ, ಆ ಘಳಿಗೆಗಾಗಿ ವರ್ಷಾನುಗಟ್ಟಲೆ ಕಾಯುತ್ತಾರೆ. ಕಾತುರದಿಂದ ಎದುರು ನೋಡುತ್ತಿರುತ್ತಾರೆ. ಈಗ ಅದೇ ಕಂಟೆಂಟ್ ಇಟ್ಟುಕೊಂಡು ಫಸ್ಟ್ ಡೇ ಫಸ್ಟ್ ಶೋ ಚಿತ್ರ ತಯಾರಾಗಿದೆ.
ಚಲನಚಿತ್ರವೊಂದು ರೂಪುಗೊಳ್ಳುವ ಹಿಂದಿನ ಶ್ರಮದಿಂದ ಹಿಡಿದು, ಅದು ತೆರೆ ಕಾಣುವವರೆಗಿನ ಕಷ್ಟ ಸವಾಲು, ಗೊಂದಲಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. ಸಿನಿಮಾದೊಳಗಿನ ಸಿನಿಮಾದ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ಈ ಮೂಲಕ ನಿರ್ದೇಶಕ ಗಿರೀಶ್ ಕನ್ನಡಿಗರಿಗೆ ಚಿತ್ರರಂಗದ ಒಂದು ಮಗ್ಗುಲನ್ನು ತೆರೆದಿಟ್ಟಿದ್ದಾರೆ. ಇದು ರೆಗ್ಯುಲರ್ ಪ್ಯಾಟರ್ನ್ ಸಿನಿಮಾವಲ್ಲ. ಇಲ್ಲಿ ಸಾಕಷ್ಟು ಪಾತ್ರಗಳು ಬರುತ್ತವೆ. ಈ ಪಾತ್ರಗಳೇ ಫಸ್ಟ್ ಡೇ ಫಸ್ಟ್ ಶೋ ಕಥೆಯನ್ನು ಮುಂದುವರೆಸಿಕೊಂಡು ಹೋಗುತ್ತವೆ.
ತನ್ನ ಬಹು ವರ್ಷಗಳ ಸಿನಿಮಾ ಕನಸು ನನಸಾಗುವ ಹೊತ್ತಿನಲ್ಲಿ ಭಾವುಕನಾಗುವ ನಿರ್ದೇಶಕ ಒಂದು ಕಡೆಯಾದರೆ, ತಾನು ಹಾಕಿದ ಬಂಡವಾಳ ಬಂದರೆ ಸಾಕು ಎಂದು ಬಯಸುವ ನಿರ್ಮಾಪಕ ಮತ್ತೊಂದು ಕಡೆ. ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಭರವಸೆಯಲ್ಲಿರುವ ನಾಯಕ-ನಾಯಕಿ, ಹೀಗೆ ಹಲವಾರು ಜನರ ಕನಸುಗಳನ್ನು ಈ ಚಿತ್ರದಲ್ಲಿ
ದಾಖಲಿಸಲಾಗಿದೆ. ಇದರ ಜೊತೆಗೆ ಹಿಸದಾಗಿ ಚಿತ್ರರಂಗಕ್ಕೆ ಬರುವ ಯುವಕರು ಎಷ್ಟು ಜವಾಬ್ದಾರಿಯುತವಾಗಿರಬೇಕು ಎಂಬುದನ್ನು ಹಲವು ದೃಶ್ಯಗಳ ಮೂಲಕ ಹೇಳಿದ್ದಾರೆ.
ಚಿತ್ರದ ಮೊದಲರ್ಧಕ್ಕಿಂತ ದ್ವಿತೀಯಾರ್ಧ ಹೆಚ್ಚು ಗಂಭೀರವಾಗಿದೆ. ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಾ ಸಾಗುವ ಈ ಚಿತ್ರ ತಮಿಳುನಾಡನ್ನು ಸುತ್ತುತ್ತದೆ. ಅದಕ್ಕೆ ಕಾರಣವೇನು ಎಂದು ಸಿನಿಮಾದಲ್ಲೇ ನೋಡಬೇಕು. ಒಂದು ಪ್ರಯತ್ನವಾಗಿ ಚಿತ್ರ ಹೊಸದಾಗಿದೆ ಎನ್ನಬಹುದು ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವ ಗಿರೀಶ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶ್ರೀನಾಥ್, ಅನಿರುದ್ಧ ಶಾಸ್ತ್ರಿ, ಬಿಎಂ ವೆಂಕಟೇಶ್, ರೇಷ್ಠಾ ಲಿಂಗರಾಜಪ್ಪ, ಗಿಲ್ಲಿ ನಟ, ದಶಾವರ ಚಂದ್ರು, ಹರೀಶ್ ಅರಸು, ಶೋಭಿತಾ ಶಿವಣ್ಣ-ಶ್ಯಾಮ್, ಗಣೇಶ್, ಪ್ರಶಾಂತ್ ವೈ.ಎನ್. ಎಲ್ಲರ ಪಾತ್ರಗಳೂ ಕಥೆಗೆ ಪೂರಕವಾಗಿ ಮೂಡಿಬಂದಿವೆ.