ಮನುಷ್ಯ ಜೀವನದಲ್ಲಿ ತಾನು ಏನೇನೋ ಆಗಬೇಕು ಎಂದುಕೊಳ್ಳುತ್ತಾನೆ. ಆದರೆ, ಆ ದೇವರು ಮಾತ್ರ ತನ್ನಿಷ್ಟದಂತೇ ಕರೆದುಕೊಂಡು ಹೋಗುತ್ತಾನೆ. ಕೋಳಿಯ ರಕ್ತ ಕಂಡರೇ ಹೆದರುವ ಹುಡುಗ ರಕ್ತದೋಕುಳಿ ಹರಿಸುವಂತಾಗುತ್ತಾನೆ. ಇದೆಲ್ಲ ಹೇಳಲು ಕಾರಣ ಈವಾರ ತೆರೆಕಂಡಿರುವ ಎಕ್ಕ ಸಿನಿಮಾ ಮೂಲಕ ಇಂಥದೇ ಕಥೆಯನ್ನು ನಿರ್ದೇಶಕ ರೋಹಿತ್ ಪದಕಿ ತೆರೆಮೇಲೆ ಮೂಡಿಸಿದ್ದಾರೆ.
ಅಣ್ಣಾವ್ರ ಕುಟುಂಬದ ಕುಡಿ ಯುವ ರಾಜಕುಮಾರ್ ಅಭಿನಯದ ಎರಡನೇ ಚಿತ್ರ. ಕನ್ನಡ ಚಿತ್ರೋದ್ಯಮದಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಈ ಚಿತ್ರಕ್ಕಾಗಿ ಕನ್ನಡದ ಮೂರು ದೊಡ್ಡ ಬ್ಯಾನರ್‌ಗಳು ಜತೆಯಾಗಿ ಹೂಡಿಕೆ ಮಾಡಿದ್ದವು. ಜತೆಗೆ ದೊಡ್ಮನೆಯಿಂದ ಅಪ್ಪು ಸ್ಥಾನವನ್ನು ತುಂಬಬಲ್ಲ ಯುವಕ ಎಂಬ ನಿರೀಕ್ಷೆಯೂ ಇತ್ತು. ಇದಲ್ಲದೆ ರತ್ನನ್ ಪ್ರಪಂಚ ಖ್ಯಾತಿಯ ರೋಹಿತ್ ಪದಕಿ ನಿರ್ದೇಶನದ ಚಿತ್ರವೂ ಹೌದು.
ಎಕ್ಕ ಚಿತ್ರದ ಕಥೆ ಪ್ರಾರಂಭವಾಗುವುದೇ ಕಾಶಿಯಿಂದ. ಕರ್ನಾಟಕದಿಂದ ಹೋಗಿ ಅಲ್ಲಿ ತಲೆ ಮರೆಸಿಕೊಂಡಿದ್ದ ರೌಡಿ ಶೀಟರ್ ಮುತ್ತು ಸುಳಿವನ್ನು ಪೊಲೀಸರಿಗೆ ಆತನ ಜತೆಗಿದ್ದ ಮಲ್ಲಿಕಾಳೇ ನೀಡುತ್ತಾಳೆ. ಮುತ್ತು ಅರೆಸ್ಟಾಗುತ್ತಾನೆ. ಅಲ್ಲಿಂದ ಆತನ ಪೂರ್ವಕಥೆ ಅನಾವರಣವಾಗುತ್ತಾ ಹೋಗುತ್ತದೆ.
ಪಾರ್ವತೀಪುರ ಗ್ರಾಮದಲ್ಲಿ ತಾಯಿ ರತ್ನಳ (ಶೃತಿ) ಜತೆ ಖುಷ್ ಖುಷಿಯಾಗಿದ್ದ ಮುತ್ತು (ಯುವ ರಾಜಕುಮಾರ್) ಜೀವನ ಹಾದಿ ತಪ್ಪುವುದೇ ಸ್ನೇಹಿತ ರಮೇಶ ಮಾಡೋ ೨೦ ಲಕ್ಷ ಸಾಲಕ್ಕೆ ಜಾಮೀನಾಗೋದ್ರಿಂದ. ಸ್ನೇಹಿತನಿಗೋಸ್ಕರ ಮುತ್ತು ಖಾಲಿ ಪತ್ರಕ್ಕೆ ಸಹಿಮಾಡುತ್ತಾನೆ. ಆದರೆ ಆ ರಮೇಶ ಹೇಳದೆ ಕೇಳದೆ ಊರುಬಿಟ್ಟು ಹೋದಾಗ, ಆ ಫೈನಾನ್ಷಿಯರ್ ಮುತ್ತು ಮನೇನ ತನ್ನ ವಶಕ್ಕೆ ತೆಗೆದುಕೊಂಡು, ಆರು ತಿಂಗಳೊಳಗೆ ಹಣ ಹೊಂದಿಸಿಕೊಟ್ಟರೆ, ಮನೆ ಬಿಟ್ಟ ಕೊಡುವುದಾಗಿ ಹೇಳುತ್ತಾನೆ. ತಾಯಿಯ ಸಲಹೆಯಂತೆ ಮುತ್ತು ರಮೇಶನನ್ನು ಹುಡುಕಿಕೊಂಡು ಬೆಂಗಳೂರು ಮಹಾನಗರಕ್ಕೆ ಬಂದಿಳಿಯುತ್ತಾನೆ. ಸ್ನೇಹಿತನ ಮನೆಯಲ್ಲಿದ್ದುಕೊಂಡು ಕ್ಯಾಬ್ ಚಾಲಕನ ಕೆಲಸ ಮಾಡೊಕೊಂಡಿರುತ್ತಾನೆ. ಒಮ್ಮೆ ಮಸ್ತಾನ್ ಭಾಯ್(ಅತುಲ್ ಕುಲಕರ್ಣಿ) ಎಂಬ ಶ್ರೀಮಂತನನ್ನು ಪ್ರಾಣಾಪಾಯದಿಂದ ಪಾರು ಮಾಡಿ, ಇನ್ನಿಲ್ಲದ ತೊಂದರೆಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ, ಅಲ್ಲಿಂದ ಮುತ್ತು ಜೀವನ ಎಲ್ಲೆಲ್ಲೋ ಹೋಗಿ ತಲುಪುತ್ತದೆ, ಮಗುವಿನಂಥ ಮುತ್ತು ಸಂದರ್ಭದ ಸುಳಿಗೆ ಸಿಲುಕಿ ಮೃಗದಂತಾಗುತ್ತಾನೆ. ಪೊಲೀಸರ ರೌಡಿ ಶೀಟರ್ ಲೀಸ್ಟನಲ್ಲಿ ಮುತ್ತು ಹೆಸರು ದಾಖಲಾಗುತ್ತದೆ, ಆಕಸ್ಮಿಕವಾಗಿ ಮುತ್ತು ಕೊಲೆಗಾರನೂ ಆಗಬೇಕಾಗುತ್ತದೆ, ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾಶಿಗೆ ಹೋಗಿ ತಲೆ ಮರೆಸಿಕೊಂಡಿರುತ್ತಾನೆ. ಆದರೆ ಆತನ ಪ್ರೇಯಸಿ ಮಲ್ಲಿಕಾ ( ಸಂಪದ)ಳೇ ಪೊಲೀಸರಿಗೆ ಆತನ ಸುಳಿವು ನೀಡುತ್ತಾಳೆ, ಆನಂತರ ಮುತ್ತು ಕಥೆ ಏನಾಯಿತು ಎನ್ನುವುದನ್ನು ತೆರೆಯ ಮೇಲೇ ನೋಡಬೇಕು.
ಎಕ್ಕ ಪ್ರೇಕ್ಷಕರ ಕುತೂಹಲ ತಣಿಸುವಲ್ಲಿ ಯಶಸ್ವಿಯಾಗಿದೆ. ಬೇರಾವುದೇ ಚಿತ್ರದ ಜೊತೆ ಹೋಲಿಕೆ ಮಾಡಲಾಗದಿದ್ರೂ, ಅಲ್ಲಲ್ಲಿ ಅಪ್ಪು ಸಿನಿಮಾಗಳ ಛಾಯೆ ಕಾಣುತ್ತದೆ, ಚಿತ್ರದಲ್ಲಿ ಕೆಲ ಭಾವನಾತ್ಮಕ ಸನ್ನಿವೇಶಗಳು ಮನಮುಟ್ಟುವಂತಿದೆ. ಬ್ಯಾಂಗಲ್ ಬಂಗಾರಿ ಹಾಗೂ ಎಕ್ಕ ಮಾರ್ ಹಾಡುಗಳು ಖುಷಿ ಕೊಡುತ್ತವೆ. ನಿರ್ದೇಶಕರು ಕಥೆಗೆ ತಕ್ಕಂತೆ ಅದ್ಧೂರಿಯಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
ನಟನೆಯ ವಿಚಾರದಕ್ಕೆ ಬಂದರೆ ಯುವ ರಾಜಕುಮಾರ್ ತನ್ನ ಎರಡು ಶೇಡ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕ್ಯಾಬ್ ಚಾಲಕ ಮುತ್ತು ಆಗಿ ಇಷ್ಟವಾಗುತ್ತಾರೆ. ಇನ್ನು ಡ್ಯಾನ್ಸ್ ಹಾಗೂ ಫೈಟ್ಸ್ ವಿಚಾರದಲ್ಲಿ ಜಬರ್ ದಸ್ತ್ ಅಭಿನಯ ನೀಡಿದ್ದಾರೆ. ಸಂಜನಾ ಆನಂದ್ ಬಜಾರಿ ನಂದಿನಿ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಆಕೆಯ ಮುತ್ತು ಮೇಲೆ ಕೋಪಗೊಂಡಾಗಲೆಲ್ಲ ಮಚ್ಚರ್ ಅನ್ನೋ ಮೂಲಕ ತನ್ನದು ರಗಡ್ ಪಾತ್ರ ಎಂದು ನೆನಪಿಸುತ್ತಾರೆ.
ಬಾರ್‌ಗರ್ಲ್ ಮಲ್ಲಿಕಾ ಆಗಿ ಸಂಪದಾ ಇಷ್ಟವಾಗುತ್ತಾರೆ. ಚಿತ್ರದ ಮೊದಲ ದೃಶ್ಯ, ಕೊನೆಯ ದೃಶ್ಯ ಆಕೆಯ ಪಾತ್ರದಿಂದಲೇ ಎಂಡ್ ಆಗುತ್ತದೆ, ಮಸ್ತಾನ್ ಭಾಯ್ ಆಗಿ ಅತುಲ್ ಕುಲಕರ್ಣಿ, ಮುತ್ತು ತಾಯಿ ರತ್ನ ಆಗಿ ಶ್ರುತಿ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಪೋಲಿಸ್ ಆಗಿ ಆದಿತ್ಯಾ ಅಬ್ಬರಿಸಿದ್ದರೂ, ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ. ಚರಣ್‌ರಾಜ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಸತ್ಯ ಹೆಗಡೆ ಅವರ ಕ್ಯಾಮರಾ ವರ್ಕ್ ಉತ್ತಮವಾಗಿದೆ. ರೋಹಿತ್ ಪದಕಿ ಜೊತೆ ಮಾಸ್ತಿ ಬರೆದಿರುವ ಸಂಭಾಷಣೆಗಳು ನೆನಪಲ್ಲುಳಿಯುತ್ತವೆ,