Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜೂನಿಯರ್ ಬಾಂಧವ್ಯದ ಹೊಳೆಯಲ್ಲಿ ಸಾಹಸಿ ಯುವಕನ ಪಯಣ...ರೇಟಿಂಗ್: 4/5****
Posted date: 19 Sat, Jul 2025 08:20:44 AM
ತಂದೆ ಮಕ್ಕಳ ಬಾಂಧವ್ಯದ ಕಥಾ ಎಳೆ ಒಳಗೊಂಡ ಜೂನಿಯರ್ ಚಿತ್ರ ಈ ಶುಕ್ರವಾರ ತೆರೆಕಂಡಿದ್ದು ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.  ಅದರಲ್ಲೂ  ಸೆಂಟಿಮೆಂಟ್ ಇಷ್ಟಪಡುವವರಿಗೆ ಗಾಢವಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.  ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಮೊದಲ ಚಿತ್ರದಲ್ಲೇ ಸಿಕ್ಸರ್ ಬಾರಿಸಿದ್ದಾರೆ.  ಜೂನಿಯರ್ ಆತನ ಚೊಚ್ಚಲ ಚಿತ್ರ ಎಂದು ಹೇಳಲಾಗದಂತೆ ಪಾತ್ರ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೊಂದು ತಂದೆ ಮಕ್ಕಳ ನಡುವಿನ ಭಾವನಾತ್ಮಕ ಪಯಣ ಎನ್ನಬಹುದು.  ಚಿತ್ರದಲ್ಲಿ  ಸಂಬಂಧಗಳ ಮಹತ್ವವನ್ನು ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಮನಮುಟ್ಟುವಂತೆ ನಿರೂಪಿಸಿದ್ದಾರೆ,  ವಿಜಯನಗರ ಗ್ರಾಮದ ಕೋದಂಡಪಾಣಿ (ರವಿಚಂದ್ರನ್) ಪತ್ನಿ ಶ್ಯಾಮಲಾ(ಸುಧಾರಾಣಿ)  ದಂಪತಿಗೆ ತಡವಾಗಿ ಮಗುವಾಗುತ್ತೆ. ಗರ್ಭಿಣಿಯಾದಾಗಲೇ ಗ್ರಾಮದ ಜನರಿಂದ ಸಾಕಷ್ಟು ಟೀಕೆಗಳನ್ನು  ಎದುರಿಸಿದ ಆ ದಂಪತಿ ಗ್ರಾಮವನ್ನೇ ತೊರೆಯಲು  ಮುಂದಾಗುತ್ತಾರೆ. ಆದರೆ ಅವರು  ಪಯಣಿಸುತ್ತಿದ್ದ ಬಸ್ ನಲ್ಲೇ ಹೆರಿಗೆ ನೋವು ಕಾಣಿಸಿಕೊಂಡು ಅಭಿ(ಕಿರೀಟಿ)ಗೆ ಜನ್ಮ ನೀಡಿದ  ಶ್ಯಾಮಲಾ ಉಸಿರು ನಿಲ್ಲಿಸುತ್ತಾಳೆ. ಇಲ್ಲಿಂದ  ಕೋದಂಡಪಾಣಿ  ಮಗನಿಗೆ ತಾನೇ ತಂದೆ, ತಾಯಿ ಎರಡೂ ಆಗಿ ಬೆಳೆಸುತ್ತಾನೆ. ಅಮ್ಮ ಇಲ್ಲದೆ ಬೆಳೆದ ಅಭಿ ಎಂಜಿನಿಯರಿಂಗ್ ಕಾಲೇಜ್ ಸೇರಿಕೊಳ್ಳುತ್ತಾನೆ. ಅಲ್ಲಿ ಆತನಿಗೆ ಸ್ಪೂರ್ತಿ(ಶ್ರೀಲೀಲಾ) ಎಂಬ ಹುಡುಗಿಯ ಜತೆ ಪ್ರೀತಿಯಾಗುತ್ತದೆ. ಬಳಿಕ ಅಭಿ ರಾವ್ ರಮೆಶ್ ಮಾಲೀಕತ್ವದ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಆತನ ಮಗಳೇ ವಿಜಯಾ(ಜೆನಿಲಿಯಾ). ಇಲ್ಲಿಂದ ಚಿತ್ರದ ಮುಖ್ಯಕಥೆ ತೆರೆದುಕೊಳ್ಳುತ್ತಾ ಹೋಗುತ್ತೆ.  ತಂದೆ  ಮಕ್ಕಳ ನಡುವಿನ ಅನುಬಂಧದ ಅನಾವರಣವಾಗತ್ತಾ  ಸಾಗುತ್ತದೆ,

ತಂದೆ ಬದುಕಿದ್ದ ಊರು ವಿಜಯನಗರ ಗ್ರಾಮದಲ್ಲಿ ನಡೆದ ದೊಡ್ಡ ಹಗರಣವನ್ನು ಅಭಿ ಬೇಧಿಸುತ್ತಾನೆ. ಆ ಸ್ಕ್ಯಾಮ್ ಸರಿಪಡಿಸಲು ಅಭಿ ಹಾಗೂ ವಿಜಯ ವಿಜಯನಗರಕ್ಕೆ ಆಗಮಿಸುತ್ತಾರೆ.ಆ ಊರನ್ನು ಕಂಡರ ಉರಿದು ಬೀಳುತ್ತಿದ್ದ ವಿಜಯಾ ತಂದೆಯ ಒತ್ತಾಯಕ್ಕೆ ಮಣಿದು ಹೋಗಬೇಕಾಗುತ್ತದೆ. ಅಷ್ಟಕ್ಕೂ ವಿಜಯನಗರ ಗ್ರಾಮದಲ್ಲಿ ನಡೆದ ಆ ಭ್ರಷ್ಟಾಚಾರವಾದರೂ ಏನು? ವಿಜಯಗೆ ಆ ಗ್ರಾಮವನ್ನು ಕಂಡರೆ ಏಕೆ ಅಸಡ್ಡೆ?  ಅಭಿ ನಡುವಿನ ಸಂಬಂಧ ಎಂಥದ್ದು ? ಆ ಇಬ್ಬರಿಗೂ  ವಿಜಯನಗರಕ್ಕೂ ಇರುವ ಸಂಬಂಧವೇನು ? ಈ ಎಲ್ಲಾ ಪ್ರಶ್ನೆಗಳಿಗೆ ಜೂನಿಯರ್ ಚಿತ್ರದಲ್ಲಿ ಉತ್ತರ ನೀಡಲಾಗಿದೆ, ಕಥೆ, ಚಿತ್ರಕಥೆಯಲ್ಲಿ ಹೊಸತೇನಿಲ್ಲದಿದ್ದರೂ, ಚಿತ್ರದ ಮೇಕಿಂಗ್‌ನಲ್ಲಿ ಅದ್ಧೂರಿತನ ಎದ್ದು ಕಾಣುತ್ತದೆ, ತೆಲುಗು ಸಿನಿಮಾಗಳ ವೈಭವವನ್ನು ಇಲ್ಲಿ ಕಾಣಬಹುದಾಗಿದೆ.
 
ಮಹೇಶ್‌ಬಾಬು ಶೈಲಿಯ ಮೇಕಿಂಗ್ ಸಿನಿಮಾ ಎನ್ನಬಹುದು. ಅಭಿ ಆಗಿ ಕಿರೀಟಿಯ ನಟನೆ  ಇಷ್ಟವಾಗುತ್ತದೆ,  ತನ್ನ ಚೊಚ್ಚಲ ಸಿನಿಮಾದಲ್ಲೇ ಅದ್ಭುತ ಡ್ಯಾನ್ಸ್, ಫೈಟ್ ನಿಂದ ಪ್ರೇಕ್ಷಕರ ಮನಗೆದ್ದು ಬಿಡುತ್ತಾರೆ. ನಟನೆಯಲ್ಲೂ ಮೇಲುಗೈ ಸಾಧಿಸಿದ್ದಾರೆ   ಚೊಚ್ಚಲ ಸಿನಿಮಾದಲ್ಲೇ ಆತ ಹಾಕಿರುವ ಎಫರ್ಟ್  ಮೆಚ್ಚಲೇಬೇಕು. ಇಡೀ ಸಿನಿಮಾದಲ್ಲಿ ತುಂಬಾನೇ ಕಾಡುವುದು ಕೋದಂಡಪಾಣಿಯ ಪಾತ್ರ. ಜೂನಿಯರ್ ಜೊತೆ ಸಿನಿಮಾದುದ್ದಕ್ಕೂ ಸೀನಿಯರ್ ಆಗಿ ರವಿಚಂದ್ರನ್ ನಿಲ್ಲುತ್ತಾರೆ. ಅವರ ಪಾತ್ರ ತುಂಬಾನೇ ಕಾಡುತ್ತೆ.ಭಾವನಾತ್ಮಕ ಸನ್ನಿವೇಶಗಳಲ್ಲಿ ರವಿಚಂದ್ರನ್ ಸಖತ್ ಇಷ್ಟವಾಗುತ್ತಾರೆ. ಇವರಿಗೆ ವ್ಯತಿರಿಕ್ತವಾಗಿ ಜೆನಿಲಿಯಾ  ಅವರ ಪಾತ್ರವಿದೆ. ಸೈಲೆಂಟ್ ಹಾಗೂ ಗಂಭೀರ ಪಾತ್ರದ ಮೂಲಕ ಅವರು ಇಷ್ಟವಾಗುತ್ತಾರೆ. ಜೂನಿಯರ್  ಸಿನಿಮಾದಲ್ಲಿ  ಕಿರೀಟಿಯ ನಟನೆಗಿಂತ ಪ್ರೇಕ್ಷಕರು ಆತನ  ಡ್ಯಾನ್ಸ್ ಹಾಗೂ ಆಕ್ಷನ್ ಸೀಕ್ವೆನ್ಸನ್ನು ಎಂಜಾಯ್ ಮಾಡುತ್ತಾರೆ. ಮಾಸ್ ಆಡಿಯನ್ಸ್ ಗೆ  ಈ ಎರಡು ಅಂಶಗಳು ಖುಷಿ ಕೊಡುತ್ತವೆ. ಅದಕ್ಕೆ ತಕ್ಕಂತೆ ದೇವಿಶ್ರೀಪ್ರಸಾದ್ ಅವರ ಸಂಗೀತ ಅದ್ಭುತವಾಗಿದೆ. ವೈರಲ್ ವೈಯ್ಯಾರಿ ಹಾಡು ನೋಡುಗರಿಗೆ ಹೆಜ್ಜೆ ಹಾಕುವಂತೆ ಪ್ರೇರೇಪಿಸುತ್ತೆ. ಸೆಂಥಿಲ್‌ಕುಮಾರ್ ಅವರ  ಕ್ಯಾಮರಾ ವರ್ಕ್ ಬಗ್ಗೆ ಹೇಳಬೇಕಾಗಿಲ್ಲ.  ರವಿಚಂದ್ರನ್ ಅವರ ಪ್ರಬುದ್ದ ನಟನೆಯೇ ಚಿತ್ರದ ಹೈಲೈಟ್. ಈ ಚಿತ್ರ ತೆಲುಗಿನಲ್ಲೂ ಬಿಡುಗಡೆಯಾಗುತ್ತಿರುವುದರಿಂದ ತೆಲುಗು ಸಿನಿಮಾ  ಛಾಯೆ ಅಲ್ಲಲ್ಲಿ ಎದ್ದು ಕಾಣುತ್ತದೆ. ಚಿತ್ರದಲ್ಲಿ  ದೊಡ್ಡ ತಾರಾಗಣವೂ ಇದೆ. ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿರೋದ್ರಿಂದ ‌ನೋಡುಗರ ಕಣ್ಣಿಗೆ ಹಬ್ಬ. ಲಾಜಿಕ್‌ ಬಿಟ್ಟು ಮಾಸ್ ಎಂಟರ್‌ಟೈನರ್ ಸಿನಿಮಾ ಅಂತ ನೋಡಿದೆ  ಜೂನಿಯರ್ ಎಲ್ಲರಿಗೂ  ಇಷ್ಟವಾಗುತ್ತದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೂನಿಯರ್ ಬಾಂಧವ್ಯದ ಹೊಳೆಯಲ್ಲಿ ಸಾಹಸಿ ಯುವಕನ ಪಯಣ...ರೇಟಿಂಗ್: 4/5**** - Chitratara.com
Copyright 2009 chitratara.com Reproduction is forbidden unless authorized. All rights reserved.