ಪವರ್‌ಸ್ಟಾರ್ ಪವನ್ ಕಲ್ಯಾಣ್ ಸದ್ಯ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ. ಅಧಿಕಾರ ಹಿಡಿಯುವುದಕ್ಕೂ ಮುಂಚೆ ಅವರು ನಟಿಸಿದ್ದ ಐತಿಹಾಸಿಕ ಚಲನಚಿತ್ರವೊಂದು ಇದೀಗ ತೆರೆಕಂಡಿದೆ, ಅದರ ಹೆಸರು ಹರಿಹರ ವೀರಮಲ್ಲು. ರಾಜಕೀಯದಲ್ಲಿ ಮುಳುಗಿದ್ದ ಪವನ್, ಬಾಕಿ ಉಳಿದಿದ್ದ ಶೂಟಂಗ್ ಮುಗಿಸಿಕೊಟ್ಟು ಚಿತ್ರದ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದೊಂದು ಕಾಲ್ಪನಿಕ ಐತಿಹಾಸಿಕ ಕಥಾನ ಇರೋ ಚಿತ್ರ. ಕ್ರಿಶ್ ಹಾಗೂ ಜ್ಯೋತಿಕೃಷ್ಣ `ಹರಿಹರ ವೀರಮಲ್ಲು` ಚಿತ್ರದ ನಿರ್ದೇಶಕರು, ಪವನ್ ಕಲ್ಯಾಣ್ ಕೂಡ ಚಿತ್ರಕ್ಕಾಗಿ ತುಂಬಾ ಎಫರ್ಟ್ ಹಾಕಿರುವುದು ಎದ್ದು ಕಾಣುತ್ತದೆ.
೧೬ನೇ ಶತಮಾನದಲ್ಲಿ ನಡೆಯುವ ಕಥೆಯಿದು, ಮೊಘಲ್ ದೊರೆ ಔರಂಗಜೇಬನ(ಬಾಬಿ ಡಿಯೋಲ್) ಆಳ್ವಿಕೆಯಲ್ಲಿ ಭಾರತೀಯರು ಸಂಕಷ್ಟ ಎದುರಿಸುತ್ತಿದ್ದ ಸಮಯ. ಆತ ಜನರನ್ನು ಬಲವಂತವಾಗಿ ಮತಾಂತರಗೊಳಿಸುತ್ತಿರುತ್ತಾನೆ. ಒಪ್ಪದಿದ್ದವರ ಮೇಲೆ ಜಿಜಿಯಾ ತೆರಿಗೆ ಹಾಕುತ್ತಿರುತ್ತಾನೆ. ಇತ್ತ ಕೊಲ್ಲೂರು ಪ್ರಾಂತ್ಯದಲ್ಲಿ ಸಿಗುವ ಬಹಳ ಅಮೂಲ್ಯವಾದ ಕೊಹಿನೂರ್ ವಜ್ರವನ್ನು ಔರಂಗಜೇಬ್ ವಶಪಡಿಸಿಕೊಳ್ಳುತ್ತಾನೆ.
ಐನಾತಿ ಕಳ್ಳ ವೀರಮಲ್ಲು(ಪವನ್ ಕಲ್ಯಾಣ)ಗೆ ವಜ್ರಗಳನ್ನು ಕದಿಯುವುದೇ ಕಾಯಕ. ಸಿರಿವಂತರ ಬಳಿ ಚಿನ್ನಾಭರಣ ಕದ್ದುತಂದು, ಅದನ್ನು ಬಡಬಗ್ಗರಿಗೆ ಕೊಡುತ್ತಾನೆ. ವೀರಮಲ್ಲುವಿನ ಶಕ್ತಿ ಸಾಮರ್ಥ್ಯ ಗೋಲ್ಕೊಂಡದ ದೊರೆ ಕುತುಬ್ ಷಾ(ದಲಿಪ್ ತಾಹಿಲ್)ಗೆ ತಿಳಿಯುತ್ತದೆ. ಆತನನ್ನು ಆಸ್ಥಾನಕ್ಕೆ ಕರೆಸಿ ಔರಂಗಜೇಬನ ಬಳಿಯಿರುವ ಕೊಹಿನೂರ್ ವಜ್ರವನ್ನು ತಂದುಕೊಡುವ ಕೆಲಸ ವಹಿಸುತ್ತಾನೆ. ಈ ಕೆಲಸವನ್ನು ವೀರಮಲ್ಲು ಏಕೆ ಒಪ್ಪಿಕೊಳ್ಳುತ್ತಾನೆ, ಅದಕ್ಕಾಗಿ ಆತ ಹಾಕುವ ಷರತ್ತು ಏನು? ಕೊಹಿನೂರ್ ವಜ್ರಕ್ಕಾಗಿ ಹೈದರಾಬಾದಿನಿಂದ ದೆಹಲಿಗೆ ಹೊರಡುವ ವೀರಮಲ್ಲು ಈ ಪ್ರಯತ್ನದಲ್ಲಿ ಯಶಸ್ವಿ ಆಗುತ್ತಾನಾ? ಕುತುಬ್ ಷಾನ ವಶದಲ್ಲಿದ್ದ ಪಂಚಮಿ(ನಿಧಿ ಅಗರ್‌ವಾಲ್) ಯಾರು? ಇದೆಲ್ಲಕ್ಕೂ ಉತ್ತರ ಚಿತ್ರದಲ್ಲಿದೆ.
ಮೊಘಲರ ಆಳ್ವಿಕೆ ಸಮಯದಲ್ಲಿ ಕಟ್ಟಿಕೊಟ್ಟಿರುವ ಒಂದು ಕಾಲ್ಪನಿಕ ಕಥೆ. ಇತ್ತೀಚೆಗೆ ಇಂತಹ ಪ್ರಯತ್ನಗಳು ನಡೆಯುತ್ತಿದೆ. ರಾಜಮೌಳಿ ನಿರ್ದೇಶನದ ` RRR` ಸಿನಿಮಾದಲ್ಲೂ ಅಲ್ಲೂರಿ ಸೀತಾರಾಮರಾಜು ಹಾಗೂ ಕೋಮುರಂ ಭೀಮ್ ಎಂಬ ಇಬ್ಬರು ಸ್ವಾತಂತ್ರ‍್ಯ ಹೋರಾಟಗಾರರ ಕಥೆಯಿತ್ತು, ಅದೇರೀತಿ ಇಲ್ಲೂ ಕೂಡ ಒಂದು ಕಾಲ್ಪನಿಕ ಕಥೆಯಿದೆ. ಅದನ್ನು ಇತಿಹಾಸದ ಪಾತ್ರಗಳ ಜೊತೆಗೂಡಿಸಿ ತೆರೆಮೇಲೆ ಕಟ್ಟಿಕೊಡಲಾಗಿದೆ.
ಕಮರ್ಷಿಯಲ್ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದ ಪವನ್ ಮೊದಲಬಾರಿಗೆ ಐತಿಹಾಸಿಕ ಹೋರಾಟಗಾರನಾಗಿ ಮಿಂಚಿದ್ದಾರೆ. ರಾಜಕೀಯ ಸೇರಿದ ನಂತರ ಪವನ್ ಕಲ್ಯಾಣ್ ಚಿತ್ರೀಕರಣದಲ್ಲಿ ಭಾಗಿಯಾಗದೇ ಇದ್ದಿದ್ದು, ಬಿಡುಗಡೆ ತಡವಾಗಿದ್ದು, ಇದೆಲ್ಲ ಚಿತ್ರಕ್ಕೆ ಹಿನ್ನಡೆಯಾಗಿರಬಹುದು. ಎಂ.ಎಂ.ಕೀರವಾಣಿ ಅವರ ಸಂಗೀತವೇ ಚಿತ್ರದ ದೊಡ್ಡ ಹೈಲೈಟ್ ಎಂದರೆ ತಪ್ಪಾಗಲಾರದು.
ಸೆಕೆಂಡ್ ಹಾಫ್‌ನಲ್ಲಿ ಬರುವ ಆಕ್ಷೂನ್ ಸನ್ನಿವೇಶಗಳನ್ನು ಮತ್ತಷ್ಟು ಚಂದವಾಗಿ ಮಾಡಬಹುದಿತ್ತು, ಫಸ್ಟ್ ಹಾಫ್ ನೋಡಿ ಕುತೂಹಲ ಹೆಚ್ಚಿಸಿಕೊಂಡಿದ್ದ ಅಭಿಮಾನಿಗಳು ಸೆಕೆಂಡ್ ಹಾಫ್ ನೋಡಿ ಬೇರೆ ಬೇರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಕ್ರಿಶ್ ಅರ್ಧದಲ್ಲೇ ಹೊರನಡೆದ ನಂತರ ಜ್ಯೋತಿಕೃಷ್ಣ ಅವರು ಈ ಚಿತ್ರವನ್ನು ಪೂರ್ತಿಗೊಳಿಸಿದ್ದರು.
ನಾಯಕ ಪವನ್ ಕಲ್ಯಾಣ್ ನಟನೆಯ ವಿಚಾರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅವರು ತೆರೆಮೇಲೆ ಬಂದಾಗಲೆಲ್ಲ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತಿತ್ತು. ಪಂಚಮಿ ಪಾತ್ರದ ನಿಧಿ ಅಗರವಾಲ್‌ಗೆ ಹೆಚ್ಚಿನ ಅವಕಾಶ ಇಲ್ಲ. ಆದರೆ ಸಣ್ಣ ಟ್ವಿಸ್ಟ್ನಿಂದ ಆಕೆಯ ಪಾತ್ರ ಮನದಲ್ಲುಳಿಯುತ್ತದೆ.
ಪವನ್ ಬಿಟ್ಟರೆ ಚಿತ್ರದಲ್ಲಿರುವ ಮತ್ತೊಬ್ಬ ಸ್ಟಾರ್ ಅಂದರೆ ಬಾಡಿ ಡಿಯೋಲ್. ತಮಗೆ ಸಿಕ್ಕ ಅವಕಾಶದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ, ಔರಂಗಜೇಬ್ ಆಗಿ ಸನ್ನಿ ಗಮನ ಸೆಳೆಯುತ್ತಾರೆ. ಇನ್ನುಳಿದಂತೆ ಸಚಿನ್ ಖಡೇಕರ್, ರಘುಬಾಬು, ಸತ್ಯರಾಜ್ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಕೀರವಾಣಿ ಅವರ ಸಂಗೀತ ಚಿತ್ರದ ಹೈಲೈಟ್. ಇನ್ನು ಸಾಯಿಮಾಧವ ಅವರ ಸಂಭಾಷಣೆ ಚಿತ್ರಕ್ಕೆ ಪೂರಕವಾಗಿದೆ. ಜ್ಞಾನಶೇಖರ್ ಹಾಗೂ ಮನೋಜ್ ಪರಮಹಂಸ ಅವರ ಕ್ಯಾಮೆರಾ ವರ್ಕ್ ಒಳ್ಳೆಯ ಅನುಭವ ನೀಡುತ್ತದೆ. ಒಟ್ಟಾರೆ ಪವನ್ ಕಲ್ಯಾಣ್ ಅಭಿಮಾನಿಗಳಿಗಂತೂ `ಹರಿಹರ ವೀರಮಲ್ಲು` ಸಿನಿಮಾ ಹಬ್ಬವೇ ಆಗಿದೆ.