Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಮಹಾವತಾರ ನರಸಿಂಹ` ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ದೃಶ್ಯ ವೈಭವ....ರೇಟಿಂಗ್ : 3.5/5****
Posted date: 27 Sun, Jul 2025 11:05:18 AM
ಅಸುರ ಹಿರಣ್ಯಕಶ್ಯಪ ಹಾಗೂ ಉಗ್ರ ನರಸಿಂಹ ಸ್ವಾಮಿಯ ಕಥೆಯನ್ನಾಧರಿಸಿ ನಿರ್ಮಿಸಿದ ಅನಿಮೇಶನ್ ಚಲನಚಿತ್ರ `ಮಹಾವತಾರಿ ನರಸಿಂಹ` ಈವಾರ ತೆರೆಕಂಡಿದ್ದು ಪ್ರೇಕ್ಷಕರಿಂದ ಅದ್ಭುತ ದೃಶ್ಯವೈಭವ ಎಂಬ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. 
 
ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಪ್ರಸ್ತುತ ಪಡಿಸಿದ್ದು, ಚಿತ್ರತಂಡಕ್ಕೆ ದೊಡ್ಡ ಶಕ್ತಿಯಾಗಿದೆ, ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ಸೇರಿ ಮಹಾವಿಷ್ಣುವಿನ ದಶಾವತಾರ ಸರಣಿಯನ್ನು ತೆರೆಮೇಲೆ ತರಲು ಮುಂದಾಗಿದ್ದು, ಅದರ ಮೊದಲ ಭಾಗವಾಗಿ ಮಹಾವತಾರ ನರಸಿಂಹ ಬಿಡುಗಡೆಯಾಗಿದೆ. ಅಶ್ವಿಕ್‌ಕುಮಾರ್ ಅವರ ಸಾರಥ್ಯದಲ್ಲಿ ಈ ಚಿತ್ರ ಮೂಡಿಬಂದಿದೆ. 
 
`ಮಹಾವತಾರ ನರಸಿಂಹ` ಚಿತ್ರ ಹಿರಣ್ಯಕಶ್ಯಪನ ಜನನದಿಂದ ಆರಂಭವಾಗುತ್ತೆ. ಮಹಾಋಷಿ ಕಶ್ಯಪ ಹಾಗೂ ಪತ್ನಿ ದಿತಿಗೆ ಜನಿಸುವ ಇಬ್ಬರು ಮಕ್ಕಳು ಹಿರಣ್ಯಾಕ್ಷ ಮತ್ತು ಹಿರಣ್ಯಕಶ್ಯಪ. ಗೋಧೂಳಿ ಸಮಯದಲ್ಲಿ ಪತಿ ಪತ್ನಿ ಸೇರಿದಾಗ ಹುಟ್ಟುವ ಅಸುರರೇ ಹಿರಣ್ಯಾಕ್ಷ ಮತ್ತು ಹಿರಣ್ಯಕಶ್ಯಪ. ಘೋರ ತಪಸ್ಸನ್ನು  ಮಾಡಿ ಬ್ರಹ್ಮದೇವನಿಂದ ತನಗೆ ಯಾರಿಂದಲೂ ಸಾವೇ ಬರದಂತೆ ವರ ಪಡೆದಿರುತ್ತಾನೆ. 
 
ಸಹೋದರ ಹಿರಣ್ಯಾಕ್ಷನನ್ನು ಸಂಹರಿಸಿದ ವಿಷ್ಣುವಿನ ಮೇಲೆ ಹಿರಣ್ಯಕಶ್ಯಪನಿಗೆ ಕೋಪ. ದೇವತೆಗಳಿಗೆ ಇನ್ನಿಲ್ಲದ ಉಪಟಳ ನೀಡುತ್ತ, ಧರೆಗೆ ತಾನೇ ದೊಡ್ಡವನು ಎಂದು ಮೆರೆಯುತ್ತಾನೆ. ಆದರೆ ಈತನ ಮಗ ಬಾಲಕ ಪ್ರಹ್ಲಾದ, ಶ್ರೀಮನ್ನಾರಾಯಣನ ಭಕ್ತ. ಹೀಗೇ ತಂದೆ ಮಗನ ಅಭಿಪ್ರಾಯಗಳು ಬೇರೆ ಬೇರೆಯಾಗಿರುತ್ತವೆ, ಮಗನಿಗೆ ಎಷ್ಟೇ ನಿಗ್ರಹಿಸಿದರೂ ಆತ ನಾರಾಯಣನ ಜಪ ಮಾಡೋದನ್ನು ಬಿಡುವುದಿಲ್ಲ, ಬೆಟ್ಟದಿಂದ ಕೆಳಗೆ ತಳ್ಳಿದರೂ, ಮದವೇರಿದ ಆನೆಗಳಿಂದ ತುಳಿಸಿದರೂ ವಿಷ್ಣುವಿನ ಅನುಗ್ರಹದಿಂದ ಪ್ರಹ್ಲಾದ ಮತ್ತೆ ಮತ್ತೆ ಬದುಕಿ ಬರುತ್ತಾನೆ. ಕೊನೆಗೆ ತಾನೇ ಸ್ವತಃ ಮಗನನ್ನು ಕೊಲ್ಲಲು ಮುಂದಾಗುತ್ತಾನೆ. ನಾರಾಯಣ ಎಲ್ಲೆಲ್ಲೂ ಇದ್ದಾನೆಂದು ಹೇಳಿದ ಪ್ರಹ್ಲಾದನ ಮಾತಿಗೆ ಕೆರಳಿದ ಹಿರಣ್ಯಕಶ್ಯಪ ಈ ಕಂಭದಲ್ಲಿರುವನೇ ಎಂದಾಗ ಕಂಭವನ್ನು ಸೀಳಿ ಹೊರಬಂದ ಉಗ್ರನರಸಿಂಹ ಹಿರಣ್ಯಕಶ್ಯಪನನ್ನು ಸಂಹಾರ ಮಾಡುತ್ತಾನೆ.   

ನಿರ್ದೇಶಕರು ಅನಿಮೇಷನ್ ಚಿತ್ರದ ಮೂಲಕ ಎಲ್ಲರಿಗೂ ಗೊತ್ತಿರುವ ಕಥೆಯನ್ನೇ ಹೇಳಿದರೂ, ಪ್ರೇಕ್ಷಕನಿಗೆ ಅದ್ಭುತವಾದ ವಿಜ್ಯೂಯಲ್ ಟ್ರೀಟ್ ನೀಡಿದ್ದಾರೆ. ಅದರಲ್ಲೂ ೩ಡಿ ತಂತ್ರಜ್ಞಾನದಲ್ಲಿ ಚಿತ್ರವನ್ನು ತೆರೆಮೇಲೆ ಕಣ್ತುಂಬಿಕೊಳ್ಳುವುದೇ  ವೈಭವ. ನಿರ್ದೇಶಕರು ಪಾತ್ರಗಳನ್ನು ಸೃಷ್ಟಿಸುವಾಗ ಸ್ಪಲ್ಪ ಮುಂಜಾಗ್ರತೆ ವಹಿಸಿದ್ದರೆ ಚಿತ್ರ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು. ಅದು ಬಿಟ್ಟರೆ ಡೈಲಾಗ್ ಪರಿಣಾಮಕಾರಿಯಾಗಿದೆ, ಚಿತ್ರದ ಕ್ಲೈಮ್ಯಾಕ್ಸ್ ತುಂಬಾ ಪರಿಣಾಮಕಾರಿಯಾಗಿದೆ, ಈಗಿನ ತಂತ್ರಜ್ಞಾನವನ್ನು ಬಳಸಿಕೊಂಡು ಅನಿಮೇಷನ್ ಚಿತ್ರದ ಮೂಲಕ ಪೌರಾಣಿಕ ಕಥೆಯನ್ನು ಪ್ರೇಕ್ಷಕರಿಗೆ ರೀಚ್ ಮಾಡಿಸಲು  ಹೊರಟಿರುವ ಈ ಪ್ರಯತ್ನಕ್ಕೆ ಒಂದು ಮೆಚ್ಚುಗೆ ಸೂಚಿಸಲೇಬೇಕು. ಅನಿಮೇಷನ್ ಸಿನಿಮಾ ಆದರೂ ಚಿತ್ರ ನೋಡುತ್ತಾ ಹೋದಂತೆ ಪ್ರೇಕ್ಷಕ ಕಥೆಯಲ್ಲೇ ಇನ್‌ವಾಲ್ ಆಗಿಬಿಡುತ್ತಾನೆ. ಚಿತ್ರದ ಸ್ಕ್ರಿಪ್ಟ್, ಡೈಲಾಗ್. ಪಾತ್ರಗಳನ್ನು ಬೆಳೆಸಿರುವ ಪರಿ ತುಂಬಾ ಚೆನ್ನಾಗಿದೆ. ಸಂಭಾಷಣೆಗಳು ಪರಿಶುದ್ಧ ಕನ್ನಡದಲ್ಲಿರುವುದು ಕೂಡ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿವೆ. 
 
ಚಿತ್ರತಂಡ ಅನಿಮೇಷನ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿದೆ. ಚಿತ್ರದಲ್ಲಿ ಬರುವ ಪ್ರಕೃತಿ, ಕಾಡು, ಅರಮನೆಯ ದೃಶ್ಯಗಳು ಅದ್ಭುತವಾಗಿವೆ. ಚಿತ್ರದ ನರೇಷನ್ ಕೂಡ ಎಲ್ಲೂ ಬೋರ್ ಹೊಡೆಸದಂತೆ ಸಾಗುತ್ತದೆ, ಹಿನ್ನೆಲೆ ಸಂಗೀತ ಕೂಡ ಕಥೆಗೆ ಪೂರಕವಾಗಿದೆ. ವಿಎಫ್‌ಎಕ್ಸ್  ಬೆರಗಾಗುವಂತೆ ಬಳಕೆ ಮಾಡಿದ್ದಾರೆ.
 
ಮಹಾವತಾರ ನರಸಿಂಹ ಚಿತ್ರದ ಕ್ಲೈಮ್ಯಾಕ್ಸ್ ವೀಕ್ಷಕರನ್ನು ಬೆರಗುಗೊಳಿಸುತ್ತೆ. ಕಲಾವಿದರು ನಟಿಸಿದ ಚಿತ್ರವನ್ನೇ ನೋಡುತ್ತಿದ್ದೇನೆ ಎನ್ನುವಷ್ಟರ ಮಟ್ಟಿಗೆ ನಮ್ಮನ್ನು ಚಿತ್ರ ಹಿಡಿದಿಟ್ಟುಕೊಳ್ಳುತ್ತೆ. ಕೊನೆಯ 15 ನಿಮಿಷವೇ ಚಿತ್ರದ ಹೈಲೈಟ್, ನರಸಿಂಹನ ಅವತಾರವಂತೂ ನೋಡುಗರಿಗೆ ಥ್ರಿಲ್ ಎನಿಸುತ್ತೆ. ಹಾಗೇ ಸಿನಿಮಾದ ಆರಂಭದ 20 ನಿಮಿಷ ಕೂಡ ಅಷ್ಟೇ ಗಮನ ಸೆಳೆಯುವಂತಿದೆ.l
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಮಹಾವತಾರ ನರಸಿಂಹ` ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ದೃಶ್ಯ ವೈಭವ....ರೇಟಿಂಗ್ : 3.5/5**** - Chitratara.com
Copyright 2009 chitratara.com Reproduction is forbidden unless authorized. All rights reserved.