ಚಿತ್ರ : ಎಲ್ಲು ಮುತ್ತಾ
ನಿರ್ಮಾಣ : HIGH 5 ಸ್ಟುಡಿಯೋಸ್, ಸತ್ಯ ಶ್ರೀನಿವಾಸ್, ಪವಿ ಮತ್ತಪ್ಪ
ನಿರ್ದೇಶಕ : ರಾ.ಸೂರ್ಯ
ಸಂಗೀತ : ಪ್ರಸನ್ನ ಕೇಶವ
ಛಾಯಾಗ್ರಹಣ : ಮೇಯ್ಯಪ್ಪ ಭಾಸ್ಕರ್
ತಾರಾಗಣ : ಶೌರ್ಯ ಪ್ರತಾಪ್, ರಾ.ಸೂರ್ಯ, ಪ್ರಿಯಾಂಕ ಮಳಲಿ, ಸತ್ಯ ಎಸ್ ಶ್ರೀನಿವಾಸ್,
ರುಹಾನ್ ಆರ್ಯ, ನವೀನ್ ಡಿ ಪಡೀಲ್, ಬೇಬಿ ಪ್ರಿಯಾ, ಯಮುನಾ ಶ್ರೀನಿಧಿ ಹಾಗೂ ಇತರರು.
"ಎಲ್ಲು ಮುತ್ತಾ" ಸಾವಿನ ಮನೆಯ ಮುಂದೆ ಡೋಲು ಬಡಿಯುವ ಯುವಕನ ಬದುಕು ಬವಣೆಯ ಸುತ್ತ ನಡೆಯುವ ಕಥಾನಕವಾಗಿದ್ದು, ಇಬ್ಬರು ಸ್ನೇಹಿತರ ಕಥೆಯೂ ಹೌದು ಈ ಚಿತ್ರದ ಕಥೆ ಸಂಪೂರ್ಣವಾಗಿ ಕೊಡಗಿನ ಗ್ರಾಮವೊಂದರಲ್ಲಿ ನಡೆಯುತ್ತದೆ.
ಆ ಊರಿನ ಯಾರದೇ ಮನೆಯಲ್ಲಿ ಸಾವಾದರೂ ಅಲ್ಲಿ ಮುತ್ತಾ(ಶೌರ್ಯ ಪ್ರತಾಪ್)ನ ತಂಡದ ಡೋಲಿನ ಸದ್ದು ಇರಲೇಬೇಕು. ಡೋಲು ಬಡಿಯುವ ಮುತ್ತಾ ಸೇರಿ 5 ಜನರ ತಂಡಕ್ಕೆ ಬಾಬನಿ (ನವೀನ್. ಡಿ. ಪಡೀಲ್)ಮುಖ್ಯಸ್ಥ. ಇನ್ನು ಎಲ್ಟು (ರಾ ಸೂರ್ಯ) ರಸ್ತೆ ಬದಿಯಲ್ಲಿ ಹೂ ಮಾರುತ್ತ ಜೀವನ ಸಾಗಿಸುವವ. ಯಾವುದೇ ಹೆಣ್ಣುಮಕ್ಕಳು ಕಂಡರೂ ಲೈನ್ ಹೊಡೆಯುತ್ತಾನೆ. ಅಷ್ಟೇ ಸುಲಭವಾಗಿ ಅವರೆಲ್ಲ ಈತನಿಗೆ ಮಾರುಹೋಗುತ್ತಾರೆ ಊರಿನ ಮುಖಂಡ ನುಚ್ಚುಮಣಿ(ರುಹನ್ ಆರ್ಯ) ಸಾವಿನ ಮನಗೆ ಬಂದು ಹಾರ ಹಾಕಿ, ಹಣದ ಸಹಾಯ ಮಾಡುತ್ತಾನೆ.
ಮುತ್ತಾ ಎಷ್ಟು ಮುಗ್ಧನೋ ಅಷ್ಟೇ ಒರಟ. ಡೋಲು ಬಡಿದ ಮನೆಯವರು ಹಣ ಕೊಡದಿದ್ದರೆ ಮುತ್ತ, ಹಣ ವಸೂಲಾಗೋವರೆಗೆ ಬಿಡೋನಲ್ಲ. ಈತನ ಕೋಪಕ್ಕೆ ಕೆಲವರು ಕಕ್ಕಾಬಿಕ್ಕಿ ಆಗುತ್ತಾರೆ. ತಾನಾಯಿತು, ತನ್ನ ಪುಟಾಣಿ ಕುಂಜಿ (ಬೇಬಿ ಪ್ರಿಯಾ) ಆಯಿತು ಎಂದುಕೊಂಡಿದ್ದ ಆತನ ಬಾಳಲ್ಲಿ ಶಕ್ತಿಶಾಲಿ ಶಂಖವೊಂದು ಬಂದು ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡಿಬಿಡುತ್ತದೆ
ಅದೇ ಊರಲ್ಲಿ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಸದಾ ನಶೆಯಲ್ಲಿ ತೇಲುವ ರಾಂಬೋಲಿಗೆ ಗೆಳೆಯ ಬೈರು ಪತ್ನಿ ಪೊನ್ನಿಯ (ಪ್ರಿಯಾಂಕ ಮಳಲಿ) ಮೇಲೆ ಕಣ್ಣು ಬೀಳುತ್ತದೆ. ಮತ್ತೊಬ್ಬ ವಿಲನ್ ಅಲೆಕ್ಸ್ ಚಟ್ವಾ(ಕಾಕ್ರೋಚ್ ಸುದೀ)ನ ವಹಿವಾಟು ದಂಧೆಯೇ ವಿಚಿತ್ರ. ಇವರೆಲ್ಲರ ಜೀವನದಲ್ಲಿ ಆ ಶಂಖ ಆಟವಾಡುತ್ತದೆ. ಕೊನೆಗೆ ಆ ಶಂಖಕ್ಕಾಗಿ ಒಬ್ಬರನ್ನೊಬ್ಬರು ಕೊಲ್ಲುವ ಹಂತ ತಲುಪುತ್ತಾರೆ.
ನವಿಲಿನಲ್ಲಿ ಮುಗ್ಧತೆಯೂ ಇದೆ. ಅದನ್ನು ಮೀರಿದ ಕ್ರೂರತೆಯೂ ಇದೆ. ಬಿಡುಗಡೆಗೂ ಮೊದಲೇ ಇಂಥದೊಂದು ಡೈಲಾಗ್ ಮೂಲಕ ಸದ್ದು ಮಾಡಿದ್ದ `ಎಲ್ಲು ಮುತ್ತ` ಚಿತ್ರದಲ್ಲಿ ಕಥಾನಾಯಕ ಮುತ್ತನ ಕ್ರೂರತೆ ಮತ್ತು ಮುಗ್ಧತೆಯ ಅನಾವರಣವಾಗಿದೆ.
ಸಾವಿನ ಮನೆಯಲ್ಲೇ ಸದಾ ಎದುರಾಗುವ ಎಲ್ಲು ಮತ್ತು ಮುತ್ತ ಬಾಲ್ಯದಲ್ಲಿ ಎಷ್ಟು ಆತ್ಮೀಯರಾಗಿದ್ದರು ಮತ್ತು ಕೊನೆಯಲ್ಲಿ ಹೇಗೆ ಪರಸ್ಪರ ವಿರೋಧಿಗಳಾದರು ಎನ್ನುವುದನ್ನು ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ. ಅಂತ್ಯದಲ್ಲಿನ ತಿರುವು ಅಷ್ಟೇ ರೋಚಕವಾಗಿದೆ
ಎಲ್ಟು ಪಾತ್ರದಲ್ಲಿ ನಿರ್ದೇಶಕ ರಾ ಸೂರ್ಯ ನಟಿಸಿದ್ದಾರೆ. ಚಿತ್ರದ ಕೇಂದ್ರ ಪಾತ್ರವಾದ ಮುತ್ತನಾಗಿ ಶೌರ್ಯ ಪ್ರತಾಪ್ ತಮ್ಮ ಶೌರ್ಯ ಪ್ರದರ್ಶಿಸಿದ್ದಾರೆ. ಡೋಲು ಬಡಿಯುವ ತಂಡದ ವ್ಯವಸ್ಥಾಪಕನಾಗಿ ಮಂಗಳೂರು ಪ್ರತಿಭೆ ನವೀನ್ ಡಿ ಪಡೀಲ್ ನಟಿಸಿದ್ದಾರೆ.
ನಾಯಕಿಯಾಗಿ ಪ್ರಿಯಾಂಕಾ ಮಳಲಿ ನಟನಾ ಪ್ರಧಾನ ಪಾತ್ರದಿಂದ ಗಮನ ಸೆಳೆದಿದ್ದಾರೆ. ಎರಡೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಯಮುನಾ ಶ್ರೀನಿಧಿಯ ಪಾತ್ರ ಗಮನ ಸೆಳೆಯುತ್ತದೆ.
ಚಿತ್ರದಲ್ಲಿ ಪ್ರಸನ್ನ ಕೇಶವ ಅವರ ಸಂಗೀತದ ಎರಡು ಹಾಡುಗಳು ಕೇಳುವಂತಿವೆ. ಹಿನ್ನೆಲೆ ಸಂಗೀತದ ಅಬ್ಬರ ಜೋರಾಗಿದೆ. ಮೆಯ್ಯಪ್ಪ ಭಾಸ್ಕರ್ ಅವರ ಛಾಯಾಗ್ರಹಣವೂ ಆಕರ್ಷಕ, ಹಳ್ಳಿ ಸೊಗಡಿನಲ್ಲಿ ನಡೆಯುವ ಅಪರಾಧ ಲೋಕವನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ.