ಚಿತ್ರ: ಪ್ರೇಮಿ
ನಿರ್ದೇಶನ, ಸಂಗೀತ : ಪ್ರದೀಪ್ ವರ್ಮಾ
ನಿರ್ಮಾಣ: ಸಿದ್ದಲಿಂಗಯ್ಯ
ತಾರಾಗಣ: ಅದ್ವಿಕ್, ಸಾತ್ವಿಕಾ(ಶ್ರಾವ್ಯ), ಶೋಭಿತಾ, ಪ್ರದೀಪ್ ವರ್ಮಾ, ಬೇಬಿ ದ್ವಿತಾ ಕೆ. ಗೌಡ ಹಾಗೂ ಇತರರು.
ಆತನಿಗೆ ಬಾಲ್ಯದಲ್ಲಿ ಯಾವುದೋ ಒಂದು ಕಾರಣಕ್ಕೆ ಮದುವೆಯಾಗಿರುತ್ತದೆ. ಆದರೆ ಅ ಹುಡುಗಿ ಎಲ್ಲೋ ಇರುತ್ತಾಳೆ. ನಾಯಕ ಆಕೆಯನ್ನು ಹುಡುಕಿಕೊಂಡು ಹೋಗುತ್ತಾನೆ. ಈ ಎಳೆ ಇಟ್ಟುಕೊಂಡು ಸಾಕಷ್ಟು ಚಿತ್ರಗಳು ತೆರೆಮೇಲೆ ಬಂದುಹೋಗಿವೆ. ಈ ವಾರ ತೆರೆಕಂಡಿರುವ ಪ್ರೇಮಿ ಕೂಡ ಅಂಥದ್ದೇ ಕಾನ್ಸೆಪ್ಟ್ ಇರೋ ಚಿತ್ರ. ಆದರೆ ನಿರ್ದೇಶಕ ಪ್ರದೀಪ್ ವರ್ಮ ಒಂದು ಲೈನ್ ಇಟ್ಟುಕೊಂಡು ಕುತೂಹಲಕರವಾಗಿ ಚಿತ್ರವನ್ನು ತೆಗೆದುಕೊಂಡು ಹೋಗಿದ್ದಾರೆ.
ನಾಯಕ ಪ್ರೇಮ್(ಅದ್ವಿಕ್) ಚಿಕ್ಕ ವಯಸಿನಲ್ಲೇ ತಂದೆ ತಾಯಿ ಕಳೆದುಕೊಂಡು ಅನಾಥನಾಗಿರುತ್ತಾನೆ. ನಂತರ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುತ್ತಾನೆ. ಈತನ ಗೆಳತಿ ಟೀನಾ(ಶೋಭಿತಾ)ಗೆ ಪ್ರೇಮ್ ಮೇಲೆ ಲವ್. ಆದರೆ, ಪ್ರೇಮ್ ಅಕೆಯ ಪ್ರೀತಿಯನ್ನು ನಿರಾಕರಿಸುತ್ತಾನೆ. ಅದಕ್ಕೆ ಕಾರಣ ಆತನಿಗೆ ಈಗಾಗಲೇ ಮದುವೆಯಾಗಿರುತ್ತದೆ. ಆತ ತನ್ನ ಪತ್ನಿಯ ಹುಡುಕಾಟದಲ್ಲಿರುತ್ತಾನೆ. ಪ್ರೇಮ್ ಗೆ ಆತನ ನಿಜವಾದ ಪತ್ನಿ ಮಧುಮತಿ (ಸಾತ್ವಿಕಾ) ಕಡೆಗೂ ಸಿಕ್ತಾಳಾ , ಆತ ಆಕೆಯನ್ನು ಹೇಗೆ ಗುರುತಿಸುತ್ತಾನೆ, ಜ್ಯೋತಿಷ್ಯದ ಮೇಲಿನ ಆತಿಯಾದ ನಂಬಿಕೆಯ ಪರಿಣಾಮಗಳೇನು ಎಂಬುದನ್ನು ನಿರ್ದೇಶಕ ಪ್ರದೀಪ್ ವರ್ಮ
ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ.
ನಾಯಕನ ತಾಯಿ ಅಕ್ಕ ಮಹಾದೇವಿ ಬರೆದ ನೈಜ ಕಥೆಗೆ ನಿರ್ದೇಶಕ ಪ್ರದೀಪ್ ವರ್ಮಾ ಜೀವಕಳೆ ತುಂಬಿದ್ದಾರೆ. ನಾಯಕ ಪ್ರೇಮ್ ಪಾತ್ರದಲ್ಲಿ ಅದ್ವಿಕ್ ಉತ್ತಮ ಅಭಿನಯ ನೀಡಿದ್ದು, ಆಕ್ಷನ್ ಡಾನ್ಸ್ ನಲ್ಲಿ ಮತ್ತಷ್ಟು ಪಾಳಗಬೇಕಿದೆ. ಇನ್ನು ಟೀನಾ ಪಾತ್ರದಲ್ಲಿ ಶೋಭಿತಾ ಮತ್ತು ಮಧುವತಿ ಪಾತ್ರದಲ್ಲಿ ಸಾತ್ವಿಕಾ ಉತ್ತಮವಾಗಿ ಅಭಿನಯಿಸಿದ್ದಾರೆ. ಸಾತ್ವಿಕಾ ನಟನೆಯಲ್ಲದೆ ತನ್ನ ವಿಭಿನ್ನ ಕಾಸ್ಟೂಮ್ ಮೂಲಕವೂ ಗಮನ ಸೆಳೆಯುತ್ತಾರೆ.
ಪ್ರೇಮಕಥೆಗಳನ್ನು ಇಷ್ಟಪಡುವವರಿಗೆ ಪ್ರೇಮಿ ಚಿತ್ರ ತುಂಬಾ ಇಷ್ಟವಾಗುತ್ತದೆ. ಯಾವುದೇ ಮಸಾಲೆ ಅಂಶಗಳಿಲ್ಲದೆ ಒಂದು ತ್ರಿಕೋನ ಪ್ರೇಮಕಥೆಯನ್ನು ಅಷ್ಟೇ ಸೊಗಸಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ಪ್ರದೀಪ್ ವರ್ಮ. ಸಂಗೀತದ ಜತೆ ಹಿನ್ನೆಲೆ ಸಂಗೀತವನ್ನೂ ಸಮರ್ಥವಾಗಿ ನಿಭಾಯಿಸಿದ್ದಾರೆ.
ಆಗಾಗ ಬರುವ ತಿರುವುಗಳು ಕುತೂಹಲ ಹೆಚ್ಚಿಸಿಕೊಂಡು ಹೋಗುತ್ತವೆ.