Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಿಜಯ ರಾಘವೇಂದ್ರ ವಿಭಿನ್ನ ಪಾತ್ರದಲ್ಲಿ; ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ಜೊತೆಗೆ ಭಾವನಾತ್ಮಕ ಕಥಾಹಂದರ ಒಳಗೊಂಡಿರುವ -ON ಡ್ಯೂಟಿ- ಚಿತ್ರದ ಸಾಹಸ ಸನ್ನಿವೇಶದ ಚಿತ್ರೀಕರಣ
Posted date: 27 Tue, Oct 2026 09:00:05 AM
ವಿಜಯ ರಾಘವೇಂದ್ರ ನಾಯಕನಾಗಿ ನಟಿಸುತ್ತಿರುವ ‘ON ಡ್ಯೂಟಿ’ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗುತ್ತಿದೆ. ಮಾಕಿನೇನಿ ಸಾಯಿ ಕೃಷ್ಣರಾಜು ನಿರ್ಮಾಣದಲ್ಲಿ, ಸಂಜೀವ್ ಮೆಗೋಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ಹಾಗೂ ಭಾವನಾತ್ಮಕ ಅಂಶಗಳನ್ನು ಒಳಗೊಂಡಿದೆ.

ಇತ್ತೀಚೆಗೆ ಮಾಗಡಿ ರಸ್ತೆಯ ಸಾಮಿಲ್‌ವೊಂದರಲ್ಲಿ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನದಲ್ಲಿ ವಿಜಯ ರಾಘವೇಂದ್ರ, ಕೃಷ್ಣಸಾಯಿ, ಸ್ಮೃತಿ ವೆಂಕಟೇಶ್, ಭಾವನ ಚಂದ್ರ, ವಿನಯಾ ಪ್ರಸಾದ್ ಹಾಗೂ ಸಂಜೀವ್ ಮೆಗೋಟಿ ಅಭಿನಯದ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಚಿತ್ರತಂಡ ಮಾಧ್ಯಮ ಮಿತ್ರರನ್ನು ಆಹ್ವಾನಿಸಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿತು.

ನಿರ್ದೇಶಕ ಸಂಜೀವ್ ಮೆಗೋಟಿ ಮಾತನಾಡಿ, “ ‘ಪೊಲೀಸ್ ಕಂಪ್ಲೇಂಟ್’ ಸೇರಿದಂತೆ ಹಲವು ಚಿತ್ರಗಳ ನಿರ್ದೇಶನ ಹಾಗೂ 45ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಕಥೆ ಬರೆದಿರುವ ಅನುಭವವಿದೆ. ಹನ್ನೆರಡು ವರ್ಷಗಳ ಬಳಿಕ ಕನ್ನಡದಲ್ಲಿ ಚಿತ್ರ ನಿರ್ದೇಶಿಸುತ್ತಿದ್ದೇನೆ. ತಾಯಿ, ಪತ್ನಿ, ಮಕ್ಕಳು ಹಾಗೂ ಕುಟುಂಬಕ್ಕಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಕರ್ತವ್ಯ ನಿರ್ವಹಿಸುತ್ತಾರೆ. ಆ ಹೊಣೆಗಾರಿಕೆಯ ಭಾವವನ್ನೂ ‘ON ಡ್ಯೂಟಿ’ ಶೀರ್ಷಿಕೆ ಪ್ರತಿಬಿಂಬಿಸುತ್ತದೆ. ಈಗಾಗಲೇ ಶೇ.75ಕ್ಕೂ ಅಧಿಕ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಇನ್ನೂ ಮೂರು ಸಾಹಸ ಸನ್ನಿವೇಶಗಳು ಹಾಗೂ ಹಾಡುಗಳ ಚಿತ್ರೀಕರಣ ಬಾಕಿಯಿದೆ” ಎಂದರು.

ನಿರ್ಮಾಪಕ ಹಾಗೂ ನಟ ಕೃಷ್ಣಸಾಯಿ ಮಾತನಾಡಿ, “ಚಿತ್ರದಲ್ಲಿ ಸೂರ್ಯ ಮತ್ತು ಚಂದ್ರ ಎಂಬ ಎರಡು ಪ್ರಮುಖ ಪಾತ್ರಗಳಿವೆ. ವಿಜಯ ರಾಘವೇಂದ್ರ ಅವರು ಒಂದು ಪಾತ್ರದಲ್ಲಿ, ನಾನು ಮತ್ತೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ. ನಿರ್ದೇಶಕರು ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಈಗಾಗಲೇ ಶೇ.75ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ನಡೆಯುತ್ತಿದೆ” ಎಂದು ತಿಳಿಸಿದರು.

ನಾಯಕ ವಿಜಯ ರಾಘವೇಂದ್ರ ಮಾತನಾಡಿ, “ಸಂಜೀವ್ ಮೆಗೋಟಿ ಅವರ ಕಥೆ ನನಗೆ ಬಹಳ ಇಷ್ಟವಾಯಿತು. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಅಂಶಗಳು ಚಿತ್ರದಲ್ಲಿವೆ. ನನ್ನ ಪಾತ್ರವೂ ವಿಭಿನ್ನವಾಗಿದ್ದು, ಈವರೆಗೂ ಮಾಡಿರದ ಪಾತ್ರ ಎನ್ನಬಹುದು. ‘ಗಣೇಶ ಮತ್ತೆ ಬಂದ’ ಚಿತ್ರದ ಬಳಿಕ ಸುಮಾರು ಇಪ್ಪತ್ತು ವರ್ಷಗಳ ನಂತರ ವಿನಯಾ ಪ್ರಸಾದ್ ಅವರೊಂದಿಗೆ ನಟಿಸುತ್ತಿರುವುದು ಸಂತೋಷ ತಂದಿದೆ. ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನದಲ್ಲಿ ಅಭಿನಯಿಸಿರುವುದು ಖುಷಿ ನೀಡಿದೆ” ಎಂದರು.

ನಾಯಕನ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹಿರಿಯ ನಟಿ ವಿನಯಾ ಪ್ರಸಾದ್, ವಿಜಯ ರಾಘವೇಂದ್ರ ಅವರೊಂದಿಗೆ ಮತ್ತೆ ಅಭಿನಯಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಥ್ರಿಲ್ಲರ್ ಮಂಜು ಮಾತನಾಡಿ, ಚಿತ್ರದ ನಾಲ್ಕು ಸಾಹಸ ಸನ್ನಿವೇಶಗಳಲ್ಲಿ ಮೂರಕ್ಕೆ ಸಾಹಸ ಸಂಯೋಜನೆ ಮಾಡುತ್ತಿದ್ದು, ಸಾಹಸ ನಿರ್ದೇಶನದ ಜೊತೆಗೆ ನಟನೆಯಲ್ಲೂ ಕಾಣಿಸಿಕೊಂಡಿರುವುದಾಗಿ ತಿಳಿಸಿದರು. ನಾಯಕಿ ಸ್ಮೃತಿ ವೆಂಕಟೇಶ್, ಇದು ನಾಯಕಿಯಾಗಿ ನಟಿಸುತ್ತಿರುವ ಮೂರನೇ ಚಿತ್ರ ಎಂದು ಹೇಳಿದರು. ಹಾಡುಗಳ ಕುರಿತು ಆರೋಹಣ ಸುಧೀಂದ್ರ ಮಾಹಿತಿ ಹಂಚಿಕೊಂಡರು.

ಚಿತ್ರಕ್ಕೆ ಹರೀಶ್ ಛಾಯಾಗ್ರಹಣ, ಆರೋಹಣ ಸುಧೀಂದ್ರ ಸಂಗೀತ ನಿರ್ದೇಶನ, ರೇಣುಕಾ ಬಾಬು ಸಂಕಲನ ಹಾಗೂ ಥ್ರಿಲ್ಲರ್ ಮಂಜು ಮತ್ತು ದಿಲೀಪ್ ಸಾಹಸ ಸಂಯೋಜನೆಯಿದೆ.

ವಿಜಯ ರಾಘವೇಂದ್ರ, ಕೃಷ್ಣಸಾಯಿ, ಸ್ಮೃತಿ ವೆಂಕಟೇಶ್, ಬೇಬಿ ಅನ್ವಿಕಾ, ಭಾವನಾ ಚಂದ್ರ, ಧರ್ಮ, ಪ್ರೇಮ, ವಿನಯಾ ಪ್ರಸಾದ್, ರವಿಕಿರಣ್, ಥ್ರಿಲ್ಲರ್ ಮಂಜು ಹಾಗೂ ಸಂಜೀವ್ ಮೆಗೋಟಿ ತಾರಾಗಣದಲ್ಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನಟಿ ಭಾವನಾ ಚಂದ್ರ, ಛಾಯಾಗ್ರಾಹಕ ಹರೀಶ್ ಸೇರಿದಂತೆ ಹಲವು ಕಲಾವಿದರು ಹಾಗೂ ತಂತ್ರಜ್ಞರು ಉಪಸ್ಥಿತರಿದ್ದರು.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿಜಯ ರಾಘವೇಂದ್ರ ವಿಭಿನ್ನ ಪಾತ್ರದಲ್ಲಿ; ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ಜೊತೆಗೆ ಭಾವನಾತ್ಮಕ ಕಥಾಹಂದರ ಒಳಗೊಂಡಿರುವ -ON ಡ್ಯೂಟಿ- ಚಿತ್ರದ ಸಾಹಸ ಸನ್ನಿವೇಶದ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95