ಚಿತ್ರ: ಬೃಂದಾವಿಹಾರಿ
ನಿರ್ದೇಶನ: ಶ್ರೀನಿವಾಸ್ ರಾಜು
ನಿರ್ಮಾಣ: ಸಮೃದ್ಧಿ ವಿ.ಮಂಜುನಾಥ್
ಸಂಗೀತ: ಹೇಶಮ್ ಅಬ್ದುಲ್ ವಹಾಬ್
ತಾರಾಗಣ: ಗಣೇಶ್, ದೇವಿಕಾ ಭಟ್, ಮಾಳವಿಕಾ ಶರ್ಮ, ರಾಮ್ ಕುಮಾರ್, ಶ್ವೇತಾ,
ಲಕ್ಷ್ಮಿ, ಅಶೋಕ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸಾಧು ಕೋಕಿಲ, ಅವಿನಾಶ್, ಕುರಿ ಪ್ರತಾಪ್, ಮಂಜು ಪಾವಗಡ ಹಾಗೂ ಇತರರು.
ರೇಟಿಂಗ್ : - 3.5 / 5 ****
ಪ್ರೀತಿ ಅಂದರೆ ಕೇವಲ ಪಡೆಯುವುದಲ್ಲ, ಕಳೆದುಕೊಂಡ ಮೇಲೂ ಅದೇ ಪ್ರೀತಿಯನ್ನು ಎದೆಯಲ್ಲಿಟ್ಟುಕೊಂಡು ಬದುಕುವುದೂ ಹೌದು ಎಂದು ನಾಯಕ ಮಾಧವನ ಪಾತ್ರದ ಮೂಲಕ ನಿರ್ದೇಶಕ ಶ್ರೀನಿವಾಸರಾಜು `ಬೃಂದಾವಿಹಾರಿ` ಚಿತ್ರದಲ್ಲಿ ಹೇಳಿದ್ದಾರೆ.
ಸ್ವಾತಂತ್ರ ಪೂರ್ವದಲ್ಲಿ ನಡೆಯೋ ಕಥೆಯಿದು. ಸುತ್ತಲೂ ಕೋಟೆಯಂಥ ಗೋಡೆಗಳ ಒಳಗಿರುವ ಬೃಂದಾವನ ಎಂಬ ಊರಲ್ಲಿ ಮಾಧವ (ಗಣೇಶ್) ಎಂಬ ಭಾವನೆಗಳಿಗೆ ಹೆಚ್ಚು ಬೆಲೆ ಕೊಡುವ ಮುಗ್ಧ ಯುವಕ. ಚಿಕ್ಕವನಿದ್ದಾಗಿಂದಲೂ ಅಜ್ಜ(ಅಶೋಕ್) ಅಜ್ಜಿ(ಲಕ್ಷ್ಮಿ)ಯ ಜತೆ ಆಡಿಬೆಳೆದ ಆತನಿಗೆ ಹೊರಗಿನ ಪ್ರಪಂಚದ ಯಾವುದೇ ಅರಿವಿರಲ್ಲ. ಇಂಥವನ ಜೀವನದಲ್ಕಿ ರಾಧಾ(ದೇವಿಕಾ ಭಟ್) ಎಂಬ ಸುಂದರ ಯುವತಿಯ ಆಗಮನವಾಗಿ, ಆತನ ಬದುಕಲ್ಲಿ ಪ್ರೀತಿ ಚಿಗುರುತ್ತದೆ.
ಆತನ ಇಡೀ ಪ್ರಪಂಚ ರಾಧಾ ಆಗಿಬಿಡುತ್ತಾಳೆ, ಅಂಥಾ ರಾಧಾ ಒಮ್ಮೆ ಆತನನ್ನು ಬಿಟ್ಟು ಹೋಗುತ್ತಾಳೆ. ಆಗ ಅವಳಿಗಾಗಿಯೇ ಬದುಕುತ್ತಿದ್ದ ಮಾಧವನ ಬದುಕೇ ಬರಡಾದಂತಾಗುತ್ತದೆ.
ಆಗ ಆತನ ಜೀವನದಲ್ಲಿ ಮೀರಾ (ಮಾಳವಿಕಾ ಶರ್ಮ) ಎಂಟ್ರು ಆಗುತ್ತಾಳೆ. ಮೀರಾಳ ಆಗಮನ ಮಾಧವನನ್ನು, ಅತನ. ಹಿಂದಿನ ಬದುಕನ್ನು, ತನ್ನ ಪ್ರೀತಿಯನ್ನು ಮತ್ತೆ ಪ್ರಶ್ನಿಸುವಂತೆ ಮಾಡುತ್ತದೆ. ಅಷ್ಟಕ್ಕೂ ಮಾಧವ ಆ ಊರಲ್ಲಿ ಏಕಿರ್ತಾನೆ, ರಾಧಾ ಆತನನ್ನು ಬಿಟ್ಟು ಹೋಗಲು ಕಾರಣವೇನು, ಈ ಮೀರಾ ಯಾರು? ಆರಂಭದಿಂದಲೂ ಕಾಡುವ ಪ್ರಶ್ನೆಗಳಿಗೆ ಇಂಟರ್ ವೆಲ್ ಬ್ಲಾಕ್ ಉತ್ತರ ನೀಡುತ್ತದೆ.
ಗಣೇಶ್ ಮತ್ತೊಮ್ಮೆ ಭಾವನಾತ್ಮಕ ಪಾತ್ರದ ಮೂಲಕ ಎಲ್ಲರ ಮನವನ್ನೂ ಗೆಲ್ಲುತ್ತಿದ್ದಾರೆ. ನಗಿಸುವ ಕಡೆ ನಗಿಸುತ್ತಾರೆ, ಅಳಿಸುವ ಕಡೆ ಕಣ್ಣು ತೇವವಾಗಿಸುತ್ತಾರೆ. ದ್ವಿತೀಯಾರ್ಧದಲ್ಲಿ ಮಾಧವನ ನೋವು, ಗೊಂದಲ, ಪ್ರೀತಿಗಾಗಿ ಹಂಬಲಿಸುವ ಪರಿ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತದೆ. `ಗಣೇಶ್ ಮತ್ತೆ ಎಮೋಷನಲ್ ಪಾತ್ರದ ಮೂಲಕ ಸೆಖೆಯುತ್ತಾರೆ. ಸಾಬೀ
ರಾಧಾ ಪಾತ್ರದಲ್ಲಿ ದೇವಿಕಾ ಭಟ್ ಮುಗ್ಧತೆಯ ಜೊತೆಗೆ ಪಾತ್ರಕ್ಕೆ ಗಾಂಭೀರ್ಯ ತಂದಿದ್ದಾರೆ. ಮೀರಾ ಪಾತ್ರದಲ್ಲಿ ಮಾಳವಿಕಾ ಶರ್ಮ ಅವರದ್ದು ಮಾಗಿದ ಅಭಿನಯ. ಅಜ್ಜಿಯಾಗಿ ಲಕ್ಷ್ಮಿ, ತಾತನಾಗಿ ಅಶೋಕ್, ಚಾನೆಲ್ ಮಾಲೀಕನಾಗಿ ರಾಮ್ ಕುಮಾರ್,
ರಂಗಾಯಣ ರಘು, ಅಚ್ಯುತ್ ಕುಮಾರ್, ಸಾಧು ಕೋಕಿಲ, ಅವಿನಾಶ್ ಅವರಂತಹ ಹಿರಿಯ ಕಲಾವಿದರ ದಂಡೇ ಚಿತ್ರಕ್ಕೆ ತೂಕ ತಂದಿದೆ. ಕಥೆ ಸರಳವಾಗಿದ್ದರೂ ಅದನ್ನು ಅದ್ದೂರಿಯಾಗಿ ಹೇಳುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಬೃಂದಾವನ ಊರಿನ ಸೆಟ್, ಹಬ್ಬದ ದೃಶ್ಯಗಳು ಕಣ್ಣಿಗೆ ಹಬ್ಬ ನೀಡುತ್ತವೆ. ನಿರ್ಮಾಪಕ ಮಂಜುನಾಥ್ ಅವರ ಅದ್ದೂರಿ ನಿರ್ಮಾಣ ತೆರೆಯ ಮೇಲೆ ಸ್ಪಷ್ಟವಾಗಿ ಕಾಣುತ್ತದೆ.
ಚಿತ್ರದ ಜೀವಾಳವೇ ಸಂಗೀತ. ಕನ್ನಡಕ್ಕೆ ಮೊದಲ ಬಾರಿಗೆ ಸಂಗೀತ ನೀಡಿರುವ ಹೇಶಮ್ ಅಬ್ದುಲ್ ವಹಾಬ್ ಅವರ ಏಳು ಹಾಡುಗಳು ಭಾವನೆಗೆ ಜೀವ ತುಂಬಿವೆ. ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಹಾಡುಗಳಿಗೆ ಮತ್ತಷ್ಟು ಮೆರಗು ನೀಡಿದೆ. ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣ ಸುಂದರವಾಗಿದೆ.
ಒಟ್ಟಾರೆ `ಬೃಂದಾವಿಹಾರಿ` ಪ್ರೀತಿ, ವಿರಹ, ಮತ್ತೆ ಪ್ರೀತಿ ಎಂಬ ಮೂರು ಭಾವನೆಗಳ ಸುತ್ತ ಸುತ್ತುವ ಭಾವನಾತ್ಮಕ ಮ್ಯೂಸಿಕಲ್ ಜರ್ನಿ ಸಿನಿಮಾ. ಕುಟುಂಬ ಸಮೇತ ಒಮ್ಮೆ ನೋಡಲೇಬೇಕಾದ ಚಿತ್ರವೀ ಹೌದು.